ADVERTISEMENT

ಗಡಿ ವಿವಾದ: ಬೆಳಗಾವಿಗೆ ಭೇಟಿ ನೀಡಲಿರುವ ಮಹಾರಾಷ್ಟ್ರ ಸಚಿವರು

ಪಿಟಿಐ
Published 28 ನವೆಂಬರ್ 2022, 8:27 IST
Last Updated 28 ನವೆಂಬರ್ 2022, 8:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ಬಿಕ್ಕಟ್ಟು ಪರಿಹರಿಸುವ ಜವಾಬ್ದಾರಿಯನ್ನು ಮಹಾರಾಷ್ಟ್ರ ಸರ್ಕಾರ ತನ್ನ ಸಚಿವರಾದ ಚಂದ್ರಕಾಂತ್‌ ಪಾಟೀಲ್‌ ಮತ್ತು ಶಂಭುರಾಜ್‌ ದೇಸಾಯಿ ಅವರಿಗೆ ನೀಡಿದ್ದು,ಈ ನಿಟ್ಟಿನಲ್ಲಿ ಉಭಯ ಸಚಿವರು ಡಿ.3ರಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆ.


ಕರ್ನಾಟಕದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದ ಕಾನೂನು ತಂಡದೊಂದಿಗೆ ಸಮನ್ವಯ ಸಾಧಿಸಲು ಪಾಟೀಲ್ ಮತ್ತು ದೇಸಾಯಿ ಅವರನ್ನು ‌ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ.


ಸರ್ಕಾರದ ನಿರ್ಣಯದ ಪ್ರಕಾರ, ಈ ಇಬ್ಬರು ಸಚಿವರು ಕರ್ನಾಟಕದಲ್ಲಿನ ಮರಾಠಿ ಮಾತನಾಡುವ ಜನರನ್ನು ಹೊಂದಿರುವ ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಕ್ಕೆ ಒತ್ತಾಯಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯೊಂದಿಗಿನ ಸಮನ್ವಯಕ್ಕೆ ಜವಾಬ್ದಾರರಾಗಿರುತ್ತಾರೆ ಎಂದು ಪಿಟಿಐ ವರದಿ ಮಾಡಿದೆ.

ADVERTISEMENT


ಮಹಾರಾಷ್ಟ್ರದ ಭಾಗವಾಗಿರುವ 865 ಹಳ್ಳಿಗಳ ನಿವಾಸಿಗಳು ದಶಕದಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಸಹ ಸಚಿವರು ಪರಿಶೀಲಿಸುತ್ತಾರೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.


ಪಾಟೀಲ್‌, ಬಿಜೆಪಿಯ ಹಿರಿಯ ನಾಯಕ. ದೇಸಾಯಿ, ಮುಖ್ಯಮಂತ್ರಿ ಶಿಂದೆ ಬಣದ ಶಿವಸೇನಾ ನಾಯಕರು. ಸೋಮವಾರ ನಡೆದ ಸಭೆಯಲ್ಲಿ ನೋಡಲ್‌ ಸಚಿವರ ನೇಮಕದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕರ್ನಾಟಕ ಸರ್ಕಾರದೊಂದಿಗೆ ದೈನಂದಿನ ವ್ಯವಹಾರ ಮತ್ತು ಮರಾಠಿ ಬಳಕೆ ಕುರಿತು ಸೂಕ್ತ ಸಂವಹನ ನಡೆಸುವಂತೆ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಬೆಳಗಾವಿ ಮತ್ತು ನೆರೆಯ ಪ್ರದೇಶಗಳ ನಿವಾಸಿಗಳ ನಿಯೋಗಕ್ಕೆ ಕೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.