ADVERTISEMENT

ಹೆಚ್ಚುವರಿ ನೀರಿನ ಬಳಕೆಗೆ ನದಿ ಜೋಡಣೆ: ತ. ನಾಡು ಯೋಜನೆ ವಿರುದ್ಧ ರಾಜ್ಯ ಮೇಲ್ಮನವಿ

ಕಾವೇರಿಯ 91 ಟಿಎಂಸಿ ಅಡಿ ನೀರು ಬಳಕೆಗೆ ರಾಜ್ಯದ ಕೋರಿಕೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 19:44 IST
Last Updated 19 ಜುಲೈ 2021, 19:44 IST
ಮೇಕೆದಾಟು
ಮೇಕೆದಾಟು    

ನವದೆಹಲಿ: ಕಾವೇರಿಯಲ್ಲಿ ಹೆಚ್ಚುವರಿಯಾಗಿ ಲಭ್ಯವಿರುವ 45 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಆರಂಭಿಸಿರುವ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ರಾಜ್ಯ ಸರ್ಕಾರವು ಸೋಮವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ಅಲ್ಲದೆ, ಕಾವೇರಿ ಕಣಿವೆಯಲ್ಲಿ ಹೆಚ್ಚುವರಿಯಾಗಿ ಲಭ್ಯವಿರುವ 91 ಟಿಎಂಸಿ ಅಡಿ ನೀರಿನ ಬಳಕೆಗೆ ಸಂವಿಧಾನದ 131ನೇ ವಿಧಿಯ ಅನ್ವಯ ಅವಕಾಶ ನೀಡುವಂತೆಯೂ ರಾಜ್ಯ ಸರ್ಕಾರ ಕೋರಿದೆ.

ಕಾವೇರಿ ನದಿಯನ್ನು ವೈಗೈ, ವೆಲ್ಲಾರು ಮತ್ತು ಗುಂಡಾರು ನದಿಗಳೊಂದಿಗೆ ಜೋಡಿಸಲು ಅನುಮತಿ ಕೋರಿ ಕಳೆದ ಫೆಬ್ರುವರಿಯಲ್ಲಿ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದ್ದು, ಅನುಮತಿ ನೀಡದಂತೆ ಸೂಚಿಸಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿದೆ.

ADVERTISEMENT

ಕಾವೇರಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿರುವ ಮೇಲ್ಮನವಿಗಳ ವಿಚಾರಣೆ ನಡೆಸಿ, 2018ರ ಫೆಬ್ರುವರಿ 16ರಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನ್ವಯ ಸಾಮಾನ್ಯವಾಗಿ ಮಳೆ ಸುರಿದ ವರ್ಷ 177.25 ಟಿಎಂಸಿ ಅಡಿ ನೀರನ್ನು ಅಂತರರಾಜ್ಯ ಗಡಿಯಲ್ಲಿರುವ ಬಿಳಿಗುಂಡ್ಲು ಮಾಪನ ಕೇಂದ್ರದಿಂದ ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಲಾಗಿದೆ. ಆ ಪ್ರಕಾರವೇ ಆ ರಾಜ್ಯದ ಪಾಲನ್ನು ನೀಡಿದ ನಂತರ ಉಳಿಯುವ ಹೆಚ್ಚುವರಿ ನೀರಿನ ಬಳಕೆಗೆ ಅವಕಾಶ ನೀಡುವಂತೆಯೂ ಕೋರಲಾಗಿದೆ.

ಕಬಿನಿಯಲ್ಲಿ ಲಭ್ಯವಿರುವ 21 ಟಿಎಂಸಿ ಅಡಿ ನೀರನ್ನು ಅಗತ್ಯ ಇರುವ ಕಡೆ ತಿರುವಿಕೊಳ್ಳಲು ಕೇರಳಕ್ಕೆ ಅವಕಾಶ ನೀಡಿದ ಬಳಿಕ ಕರ್ನಾಟಕವು 284.75 ಟಿಎಂಸಿ ಅಡಿ ನೀರು ಬಳಕೆಯ ಅವಕಾಶ ಹೊಂದಿದೆ. ಕಣಿವೆಯಲ್ಲಿ ಲಭ್ಯವಿರುವ 91 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಬಳಸಬಹುದಾಗಿದೆ ಎಂದು ಕರ್ನಾಟಕ ಅರ್ಜಿಯಲ್ಲಿ ಪ್ರತಿಪಾದಿಸಿದೆ.

1934ರಿಂದ 1972ರವರೆಗಿನ ಲಭ್ಯ ದಾಖಲೆಗಳ ಅನ್ವಯ ಬಿಳಿಗುಂಡ್ಲು ಮಾಪನ ಕೇಂದ್ರದವರೆಗಿನ ಕಾವೇರಿ ಕಣಿವೆ ಪ್ರದೇಶ ವ್ಯಾಪ್ತಿಯಲ್ಲಿ ವಾರ್ಷಿಕವಾಗಿ 91 ಟಿಎಂಸಿ ಅಡಿ ಹೆಚ್ಚುವರಿ ನೀರಿನ ಲಭ್ಯತೆಯನ್ನು ಕರ್ನಾಟಕ ಅಂದಾಜಿಸಿದೆ.

ಒಂದೊಮ್ಮೆ ನದಿ ಜೋಡಣೆ ಯೋಜನೆಗೆ ಅವಕಾಶ ನೀಡಿದಲ್ಲಿ ತಮಿಳುನಾಡಿಗೆ ಕಾವೇರಿ ಹೆಚ್ಚುವರಿ ನೀರಿನ ಬಳಕೆಯ ಮುಂಗಡ ಸ್ವಾಧೀನಕ್ಕೂ ಅನುಮತಿ ನೀಡಿದಂತಾಗಲಿದೆ. ಅಲ್ಲದೆ, ಕರ್ನಾಟಕವು ತನ್ನ ವ್ಯಾಪ್ತಿಯ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಕಾನೂನು ಅಡೆತಡೆಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ಮೇಲ್ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಕಾವೇರಿ ಕಣಿವೆಯ ನೀರಿನ ಬಳಕೆಗಾಗಿ ಕರ್ನಾಟಕ ಆರಂಭಿಸಲಿರುವ ಮೇಕೆದಾಟು ಮತ್ತು ಮಾರ್ಕಂಡೇಯ ಯೋಜನೆಗಳನ್ನು ವಿರೋಧಿಸಿ ಈಗಾಗಲೇ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಮೇಕೆದಾಟು ಯೋಜನೆಗೆ ಪರಿಸರ ಅನುಮತಿ ನೀಡದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ.

‘ಪ್ರತೀ ರಾಜ್ಯಕ್ಕೂ ಪಾಲು ಸಲ್ಲಬೇಕು’

ಪುದುಚೇರಿ (ಪಿಟಿಐ): ಕಾವೇರಿ ನದಿಯನ್ನು ಅವಲಂಬಿಸಿರುವ, ಅಚ್ಚುಕಟ್ಟು ಪ್ರದೇಶದ ಪ್ರತಿಯೊಂದು ರಾಜ್ಯಕ್ಕೂ ನದಿ ನೀರಿನ ಸಮರ್ಪಕ ಹಂಚಿಕೆಯಾಗಬೇಕು ಎಂದು ಪುದುಚೇರಿಯ ಲೆಫ್ಟಿನಂಟ್‌ ಗವರ್ನರ್‌ ತಮಿಳ್‌ಇಸೈ ಸೌಂದರರಾಜನ್‌ ಹೇಳಿದರು.

ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಯನ್ನು ತಮಿಳುನಾಡು ಸರ್ಕಾರ ವಿರೋಧಿಸಿರುವ ಸಂದರ್ಭದಲ್ಲಿ, ಅವರು ಈ ಹೇಳಿಕೆ ನೀಡಿದ್ದಾರೆ.

ಇಲ್ಲಿನ ಪುದುಕುಪ್ಪಂನಲ್ಲಿ, ಈರಂ ಫೌಂಡೇಶನ್‌ ಆಯೋಜಿಸಿದ್ದ ಕೆರೆಗಳ ಹೂಳು ತೆಗೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪುದುಚೇರಿಯ ಕಾರೈಕಲ್‌, ನೀರಾವರಿಗಾಗಿ ಕಾವೇರಿಯನ್ನೇ ಅವಲಂಬಿಸಿದೆ. ಹೀಗಾಗಿ ಆಯಾ ರಾಜ್ಯಗಳ (ಕರ್ನಾಟಕ, ತಮಿಳುನಾಡು) ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಪಾಲು ಅವುಗಳಿಗೆ ಸಮರ್ಪಕವಾಗಿ ಸಿಗಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.