ADVERTISEMENT

ಕಾಂಗ್ರೆಸ್ ತಪ್ಪಿನಿಂದಲೇ ಕರ್ತಾರಪುರ ಪಾಕ್‌ನಲ್ಲಿದೆ: ಪ್ರಧಾನಿ ಮೋದಿ

ಪಿಟಿಐ
Published 4 ಡಿಸೆಂಬರ್ 2018, 17:40 IST
Last Updated 4 ಡಿಸೆಂಬರ್ 2018, 17:40 IST
   

ಹನುಮಾನ್‌ಗಡ (ರಾಜಸ್ಥಾನ):ರಾಜಸ್ಥಾನ ವಿಧಾನಸಭಾ ಚುನಾವಣೆಯ ಮತದಾನದ ದಿನ ಹತ್ತಿರವಾಗುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ‘ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಕಾಂಗ್ರೆಸ್‌ನವರು ಮಾಡಿದ ತಪ್ಪಿನಿಂದಲೇ ಸಿಖ್ಖರ ಪವಿತ್ರ ಕ್ಷೇತ್ರ ಪಾಕಿಸ್ತಾನದ ಗಡಿಯಲ್ಲಿ ಉಳಿಯಿತು’ ಎಂದು ಮೋದಿ ಆರೋಪಿಸಿದ್ದಾರೆ.

ಇಲ್ಲಿ ನಡೆದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಅವರು ಮಾತನಾಡಿದ್ದಾರೆ.

‘ಸ್ವಾತಂತ್ರ್ಯದ ಜತೆಗೇ ದೇಶ ವಿಭಜನೆಯಾಯತು. ಆಗ ಕಾಂಗ್ರೆಸ್‌ನವರು ಅಧಿಕಾರದ ಮೇಲಷ್ಟೇ ಕಣ್ಣಿಟ್ಟಿದ್ದರು. ಅದರ ಬದಲಿಗೆ ಸಿಖ್ಖರ ಬಗ್ಗೆ ಸ್ವಲ್ಪ ಗಮನ ನೀಡಿದ್ದರೂ, ಸ್ವಲ್ಪವೇ ಬುದ್ಧಿ ಉಪಯೋಗಿಸಿದ್ದಿದ್ದರೂ ಕರ್ತಾರಪುರ ಭಾರತದಲ್ಲೇ ಉಳಿಯುತ್ತಿತ್ತು. ಕಾಂಗ್ರೆಸ್‌ನವರು ಅಧಿಕಾರ ಹಿಡಿಯಲಷ್ಟೇ ಆತುರ ತೋರಿದರು’ ಎಂದು ಮೋದಿ ಆರೋಪಿಸಿದ್ದಾರೆ.

ADVERTISEMENT

‘ಸಿಖ್ಖರ ಭಾವನೆಗಳ ಬಗ್ಗೆ ಕಾಂಗ್ರೆಸ್‌ಗೆ ಗೌರವವಿಲ್ಲ. ಹೀಗಾಗಿಯೇ 70 ವರ್ಷ ಅಧಿಕಾರದಲ್ಲಿದ್ದರೂ ಕರ್ತಾರಪುರ ಕಾರಿಡಾರ್ ಅಸ್ತಿತ್ವಕ್ಕೆ ಬರಲಿಲ್ಲ. ಸಿಖ್ಖರಿಗೆ ತಮ್ಮ ಪವಿತ್ರ ಸ್ಥಳವನ್ನು ನೋಡಲು ಕಾಂಗ್ರೆಸ್ ಸರ್ಕಾರ ವ್ಯವಸ್ಥೆ ಮಾಡಿಕೊಡಲಿಲ್ಲ. ಈಗ ಕಾರಿಡಾರ್ ನಿರ್ಮಾಣವಾಗುತ್ತಿದೆ. ಅದರ ಶ್ರೇಯ ನಿಮ್ಮೆಲರ ಮತಗಳಿಗೆ ಸಲ್ಲುತ್ತದೆ’ ಎಂದು ಮೋದಿ ಹೇಳಿದ್ದಾರೆ.

‘ನಾಮಧಾರ್‌ಗೆ ಗ್ರೀನ್‌ ಚಿಲ್ಲಿ (ಹಸಿ ಮೆಣಸಿನಕಾಯಿ) ಮತ್ತು ರೆಡ್ ಚಿಲ್ಲಿ (ಒಣ ಮೆಣಸಿನಕಾಯಿ) ಮಧ್ಯೆ ವ್ಯತ್ಯಾಸ ಗೊತ್ತಿಲ್ಲ. ಗ್ರೀನ್‌ ಚಿಲ್ಲಿಗೆ ಕಡಿಮೆ ಬೆಲೆ ಮತ್ತು ರೆಡ್ ಚಿಲ್ಲಿಗೆ ಹೆಚ್ಚು ಬೆಲೆ ಬರುತ್ತದೆ ಎಂದು ರೈತರು ಹೇಳಿದರೆ, ‘ರೆಡ್‌ ಚಿಲ್ಲಿಯನ್ನೇ ಬೆಳೆಯಿರಿ’ ಎಂದು ನಾಮಧಾರ್ ಹೇಳುತ್ತಾರೆ’ ಎಂದು ರಾಹುಲ್ ಗಾಂಧಿ ಅವರನ್ನು ಮೋದಿ ಲೇವಡಿ ಮಾಡಿದ್ದಾರೆ.

‘ರೈತನ ಮಗನಾಗಿದ್ದ ಸರ್ದಾರ್ ಪಟೇಲ್ ಅವರು ದೇಶದ ಮೊದಲ ಪ್ರಧಾನಿ ಆಗಿದ್ದಿದ್ದರೆ ರೈತರು ಈಗ ಇರುವ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ರೈತರ ಇಂದಿನ ಧಾರುಣ ಸ್ಥಿತಿಗೆ ದೇಶವನ್ನು 70 ವರ್ಷ ಒಂದೇ ಕುಟುಂಬದ ನಾಲ್ಕು ತಲೆಮಾರು ಆಳಿದ್ದೇ ಕಾರಣ’ ಎಂದು ಅವರು ಆರೋಪಿಸಿದ್ದಾರೆ.

‘2008ರಲ್ಲಿ ದೇಶದ ರೈತರ ಸಾಲ ₹ 6 ಲಕ್ಷ ಕೋಟಿಯಷ್ಟಿತ್ತು. ಆದರೆ ಅಂದಿನ ಸರ್ಕಾರ ಕೇವಲ ₹ 58,000 ಕೋಟಿ ಸಾಲಮನ್ನಾ ಮಾಡಿತ್ತು. ಸಾಲಮನ್ನಾದ ಪ್ರಯೋಜನ ಪಡೆದವರ‍್ಯಾರೂ ರೈತರಲ್ಲ ಎಂದು ಸಿಎಜಿ ವರದಿ ಹೇಳಿದೆ. ಕಾಂಗ್ರೆಸ್‌ನ ಸಾಲಮನ್ನಾ ಒಂದು ದೊಡ್ಡ ಹಗರಣ’ ಎಂದು ಮೋದಿ ಆರೋಪಿಸಿದ್ದಾರೆ.

ಯುವಕರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು?

ಅಲ್ವರ್ :‘2 ಕೋಟಿ ಉದ್ಯೋಗಸೃಷ್ಟಿಸುತ್ತೇವೆ ಎಂದು 2014ರ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಹೇಳುತ್ತಿದ್ದರು. ಅವರು ಉದ್ಯೋಗ ಸೃಷ್ಟಿಸಿದ್ದು ನಿಜವೇ ಆಗಿದ್ದಿದ್ದರೆ ಅಲ್ವರ್‌ನಲ್ಲಿ ಮೂವರು ನಿರುದ್ಯೋಗಿ ಯುವಕರೇಕೆ ಈಚೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಉದ್ಯೋಗ ಸಿಗದ ಕಾರಣ ಬೇಸತ್ತಿದ್ದ ಇಲ್ಲಿನ ನಾಲ್ವರು ಯುವಕರು ನವೆಂಬರ್‌ನ ಕೊನೆಯ ವಾರದಲ್ಲಿ ರೈಲಿನಿಂದ ಜಿಗಿದಿದ್ದರು. ನಾಲ್ವರಲ್ಲಿ ಮೂವರು ಮೃತಪಟ್ಟಿದ್ದರು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಪೊಲೀಸರು ಹೇಳಿಕೆ ನೀಡಿದ್ದರು.

ಈ ವಿಷಯವನ್ನಿಟ್ಟುಕೊಂಡು ರಾಹುಲ್ ಗಾಂಧಿ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.