ಚೆನ್ನೈ: ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ್‍ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರವನ್ನು ಪಕ್ಷದ ಮುಖ್ಯಸ್ಥ, ನಟ ವಿಜಯ್ ಭಾನುವಾರ ಘೋಷಿಸಿದ್ದಾರೆ.
‘ನಿನ್ನೆ ಕರೂರಿನಲ್ಲಿ ನಡೆದ ಘಟನೆಯ ಬಗ್ಗೆ ಯೋಚಿಸುವಾಗ ತುಂಬಾ ನೋವಾಗುತ್ತದೆ. ಯಾರು ಎಷ್ಟೇ ಸಾಂತ್ವನದ ಮಾತುಗಳನ್ನು ಆಡಿದರೂ ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ದುಃಖವನ್ನು ಮರೆಮಾಚಲು ಸಾಧ್ಯವಿಲ್ಲ. ಇದು ನಿಜಕ್ಕೂ ತುಂಬಲಾರದ ನಷ್ಟ’ ಎಂದು ವಿಜಯ್ ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
‘ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹20 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹2 ಲಕ್ಷ ಕೊಡಲು ನಾವು ಇಚ್ಛಿಸಿದ್ದೇವೆ. ಕುಟುಂಬ ಸದಸ್ಯನನ್ನು ಕಳೆದುಕೊಂಡ ನೋವಿನ ಎದುರು ಈ ಮೊತ್ತ ಏನು ಅಲ್ಲ ಎಂಬುದು ತಿಳಿದಿದೆ. ಆದರೂ, ಈ ಸಂದರ್ಭದಲ್ಲಿ ನಿಮ್ಮ ಕುಟುಂಬದ ಸದಸ್ಯನಾಗಿ ನಿಮ್ಮೊಂದಿಗೆ ನಿಲ್ಲುವುದು ನನ್ನ ಕರ್ತವ್ಯವಾಗಿದೆ’ ಎಂದಿದ್ದಾರೆ.
‘ಕಾಲ್ತುಳಿತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಶೀಘ್ರ ಗುಣಮುಖರಾಗಿ ಮನೆಗೆ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.
ಶನಿವಾರ ಕರೂರಿನಲ್ಲಿ ನಡೆದ ರ್‍ಯಾಲಿ ವೇಳೆ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 39 ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 16 ಮಹಿಳೆಯರು, 8 ಮಕ್ಕಳಿದ್ದಾರೆ.
ಘಟನೆಗೆ ನಿಖರ ಕಾರಣವೆನೆಂಬುವುದು ಇನ್ನಷ್ಟೆ ತಿಳಿದುಬರಬೇಕಿದೆ.
ಸರ್ಕಾರದಿಂದ ₹10 ಲಕ್ಷ ಪರಿಹಾರ:
ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಲಾ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ ತಲಾ ₹1 ಲಕ್ಷ ನೀಡುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.