ಬಂಧನ (ಸಾಂದರ್ಭಿಕ ಚಿತ್ರ)
ವಾರಾಣಸಿ: ಕಾಶಿ ವಿಶ್ವನಾಥ ದೇಗುಲದಲ್ಲಿ ಸುಗಮವಾಗಿ ಪೂಜೆ, ದರ್ಶನ ವ್ಯವಸ್ಥೆ ಮಾಡಿಸುತ್ತೇವೆಂದು ಅರ್ಚಕರ ಸೋಗಿನಲ್ಲಿ ಭಕ್ತರಿಂದ ಸುಲಿಗೆ ಮಾಡುತ್ತಿದ್ದ 21 ಮಂದಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ದೇಗುಲದ ಆವರಣದಲ್ಲಿ ಹಲವರು ಭಕ್ತರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಹಾಗೂ ಪೂಜೆ, ದರ್ಶನಕ್ಕೆ ವ್ಯವಸ್ಥೆ ಮಾಡಿಸುತ್ತೇವೆ ಎಂದು ನಂಬಿಸಿ ಭಕ್ತರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಕಳೆದ ಕೆಲವು ದಿನಗಳಿಂದ ದೂರುಗಳು ಬರುತ್ತಿದ್ದವು. ಈ ಹಿನ್ನೆಲೆ ತನಿಖೆಗೆ ದಶಾಶ್ವಮೇಧ ಮತ್ತು ಚೌಕ ಪೊಲೀಸ್ ಠಾಣೆಯ ಪೊಲೀಸರನ್ನೊಳಗೊಂಡ ಜಂಟಿ ತಂಡ ರಚನೆ ಮಾಡಲಾಗಿತ್ತು. ತನಿಖೆ ನಡೆಸಿದ ವೇಳೆ ದಶಾಶ್ವಮೇಧ ಪೊಲೀಸರಿಗೆ 15 ಮಂದಿ ಹಾಗೂ ಚೌಕ ಠಾಣಾ ಪೊಲೀಸರಿಗೆ 6 ಜನ ನಕಲಿ ಅರ್ಚಕರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಪ್ರಕ್ರಿಯೆ ನಡೆಸಲಾಗುತ್ತಿದೆ. ದೇಗುಲದ ಆವರಣದಲ್ಲಿ ನಮ್ಮ ತಂಡ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಇನ್ನಷ್ಟು ಇರಬಹುದಾದ ನಕಲಿ ಅರ್ಚಕರನ್ನು ಬಂಧಿಸಲಾಗುವುದು ಎಂದು ಸ್ಥಳೀಯ ಎಸಿಪಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.