ADVERTISEMENT

‍ಪುಲ್ವಾಮಾ ಉಗ್ರರ ದಾಳಿಗೆ ಪ್ರತೀಕಾರ: ಸೇನೆಗೆ ಸರ್ವಾಧಿಕಾರ

ದಾಳಿಗೆ ಸರ್ವತ್ರ ಆಕ್ರೋಶ: ತಕ್ಕ ಪಾಠ ಕಲಿಸುವುದಾಗಿ ಪ್ರಧಾನಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 1:01 IST
Last Updated 16 ಫೆಬ್ರುವರಿ 2019, 1:01 IST
ಹುತಾತ್ಮ ಯೋಧರೊಬ್ಬರ ಶವಪೆಟ್ಟಿಗೆ ಸಾಗಿಸುವಾಗ ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್‌ ಸಿಂಗ್‌ ಹಾಗೂ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೆಗಲುಕೊಟ್ಟರು –ಪಿಟಿಐ ಚಿತ್ರ
ಹುತಾತ್ಮ ಯೋಧರೊಬ್ಬರ ಶವಪೆಟ್ಟಿಗೆ ಸಾಗಿಸುವಾಗ ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್‌ ಸಿಂಗ್‌ ಹಾಗೂ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೆಗಲುಕೊಟ್ಟರು –ಪಿಟಿಐ ಚಿತ್ರ   

ನವದೆಹಲಿ: ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ನಡೆಸಿದವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ದಾಳಿ ನಡೆಸಿದವರು ಮತ್ತು ಅದಕ್ಕೆ ಬೆಂಬಲ ನೀಡಿದವರು ಸರಿಯಾದ ಬೆಲೆ ತೆರುವಂತೆ ಮಾಡಲು ಭದ್ರತಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಎಲ್ಲಿ, ಯಾವಾಗ ಮತ್ತು ಹೇಗೆ ಸೇಡು ತೀರಿಸಿಕೊಳ್ಳಬೇಕು ಎಂಬುದು ಭದ್ರತಾ ಪಡೆಗಳಿಗೆ ಬಿಟ್ಟ ವಿಚಾರ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.

ಸಂಪುಟದ ಭದ್ರತಾ ಸಮಿತಿಯು ಮೋದಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಸಿ ಹಲವು ತುರ್ತು ಮತ್ತು ನಿರ್ಣಾಯಕ ಕ್ರಮಗಳನ್ನು ಘೋಷಿಸಿದೆ. ಪಾಕಿಸ್ತಾನಕ್ಕೆ ನೀಡಲಾಗಿದ್ದ ‘ಅತಿ ಅನುಕೂಲಿತ ರಾಷ್ಟ್ರ’ (ಮೋಸ್ಟ್‌ ಫೇವರ್ಡ್‌ ನೇಷನ್‌) ಸ್ಥಾನವನ್ನು ಹಿಂದಕ್ಕೆ ಪಡೆಯಲಾಗಿದೆ. ಭಾರತಕ್ಕೆ ಪಾಕಿಸ್ತಾನದ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ದಾಖಲಿಸಲಾಗಿದೆ. ಜಾಗತಿಕ ಸಮುದಾಯದಲ್ಲಿ ಪಾಕಿಸ್ತಾನವನ್ನು ‘ಸಂಪೂರ್ಣ ಮೂಲೆಗುಂಪು’ ಮಾಡಲು ಸತತ ಯತ್ನ ಮಾಡಲು ಸಂಪುಟ ಸಮಿತಿಯು ನಿರ್ಧರಿಸಿದೆ. ಇದಲ್ಲದೆ, 1986ರಿಂದಲೇ ಬಾಕಿ ಇರುವ ‘ಭಯೋತ್ಪಾದನೆ ತಡೆ ಸಮಗ್ರ ಒಪ್ಪಂದ’ ಜಾರಿಗೆ ವಿಶ್ವಸಂಸ್ಥೆಯನ್ನು ಒತ್ತಾಯಿಸಲೂ ತೀರ್ಮಾನಿಸಲಾಗಿದೆ.

ADVERTISEMENT

ಪುಲ್ವಾಮಾ ದಾಳಿಯ ಬಳಿಕ ಕೇಂದ್ರ ಸರ್ಕಾರವು ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಕೆಲಸ ಮಾಡಿದೆ. ‘ಹೊಸ ನೀತಿ ಮತ್ತು ಹೊಸ ರೀತಿಯ ಭಾರತ ಎದುರಿಗಿದೆ ಎಂಬುದನ್ನು ನೆರೆಯ ದೇಶವು (ಪಾಕಿಸ್ತಾನ) ಮರೆಯುತ್ತಿದೆ’ ಎಂಬ ಎಚ್ಚರಿಕೆಯನ್ನು ಸರ್ಕಾರ ನೀಡಿದೆ.

‘ಆಕ್ರೋಶ ಮೇರೆ ಮೀರಿದೆ ಮತ್ತು ನಿಮ್ಮ ರಕ್ತ ಕುದಿಯುತ್ತಿದೆ ಎಂಬುದು ನನಗೆ ಗೊತ್ತು. ತಕ್ಕ ಪಾಠ ಕಲಿಸಬೇಕು ಎಂಬ ನಿರೀಕ್ಷೆ ಮತ್ತು ಭಾವನೆ ಈ ಕ್ಷಣದಲ್ಲಿ ಎಲ್ಲರಲ್ಲಿಯೂ ಇರುವುದು ಸಹಜವೇ ಆಗಿದೆ. ಇಂತಹ ದಾಳಿಗೆ ದೇಶವು ಸರಿಯಾದ ಉತ್ತರವನ್ನೇ ನೀಡಲಿದೆ. ಭಾರತವನ್ನು ಬೆದರಿಸಲು ಸಾಧ್ಯವಿಲ್ಲ. ಭದ್ರತಾ ಪಡೆಗಳು ಏನು ಮಾಡಬೇಕೋ ಅದಕ್ಕೆ ಬೇಕಾದ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ನಮ್ಮ ಧೀರ ಯೋಧರ ಮೇಲೆ ಪರಿಪೂರ್ಣ ವಿಶ್ವಾಸ ಇದೆ’ ಎಂದು ಮೋದಿ ಹೇಳಿದ್ದಾರೆ.

‘ನೀವು ಬಹುದೊಡ್ಡ ತಪ್ಪು ಮಾಡಿದ್ದೀರಿ ಎಂದು ಭಯೋತ್ಪಾದಕ ದಾಳಿ ಮಾಡಿದವರು ಮತ್ತು ಅದಕ್ಕೆ ಕುಮ್ಮಕ್ಕು ಕೊಟ್ಟವರಿಗೆ ನಾನು ಹೇಳುತ್ತಿದ್ದೇನೆ. ಇದಕ್ಕಾಗಿ ಅವರು ತೆರಬೇಕಾದ ಬೆಲೆ ಬಹಳ ದೊಡ್ಡದಾಗಿರುತ್ತದೆ. ದಾಳಿ ನಡೆಸಿದ ಸಂಘಟನೆಗೆ ಶಿಕ್ಷೆಯಾಗುವುದು ಖಚಿತ. 130 ಕೋಟಿ ಭಾರತೀಯರು ಸರಿಯಾದ ಪಾಠ ಕಲಿಸಲಿದ್ದಾರೆ’ ಎಂದು ಭದ್ರತೆಯ ಸಂಪುಟ ಸಮಿತಿಯ ಸಭೆಯ ಬಳಿಕ ಮೋದಿ ಎಚ್ಚರಿಕೆ ನೀಡಿದ್ದಾರೆ.

ದೇಶದ ಮನಸ್ಥಿತಿಯನ್ನು ಅರಿತುಕೊಂಡಿರುವ ಕಾಂಗ್ರೆಸ್‌ ಪಕ್ಷ, ಶುಕ್ರವಾರ ತನ್ನ ನಿಲುವನ್ನು ಬದಲಾಯಿಸಿಕೊಂಡಿದೆ. ದಾಳಿಯ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮುಗಿಬಿದ್ದಿತ್ತು. ಕೇಂದ್ರದ ನೀತಿಗಳ ವೈಫಲ್ಯದ ಸಂಕೇತ ಇದು ಎಂದು ಹೇಳಿತ್ತು. ಆದರೆ, ಸರ್ಕಾರದ ಜತೆಗೆ ನಿಲ್ಲುವುದಾಗಿ ಶುಕ್ರವಾರ ಹೇಳಿದೆ. ‘ಇಂತಹ ಬಹಳ ಸೂಕ್ಷ್ಮ ಮತ್ತು ಭಾವನಾತ್ಮಕ ಕ್ಷಣ’ದಲ್ಲಿ ಯಾರೂ ಸರ್ಕಾರವನ್ನು ಟೀಕಿಸಬಾರದು ಮತ್ತು ರಾಜಕಾರಣವನ್ನು ಮೀರಿ ವರ್ತಿಸಬೇಕು ಎಂದು ಮೋದಿ ಅವರೂ ಕರೆ ಕೊಟ್ಟಿದ್ದಾರೆ.

ಅಮೆರಿಕ ಮತ್ತು ಚೀನಾ ಸೇರಿ ಜಗತ್ತಿನ ಪ್ರಮುಖ ದೇಶಗಳು ದಾಳಿಯನ್ನು ಖಂಡಿಸಿವೆ. ಭಯೋತ್ಪಾದನೆ ಎಂಬುದು ಮಾನವೀಯತೆಯ ಮೇಲಿನ ಕ್ರೌರ್ಯ. ಹಾಗಾಗಿ ಈ ಹೋರಾಟದಲ್ಲಿ ಇಡೀ ಜಗತ್ತು ಒಂದಾಗಬೇಕು ಎಂದು ಮೋದಿ ಅವರು ವಿನಂತಿ ಮಾಡಿಕೊಂಡಿದ್ದಾರೆ.

ಹುತಾತ್ಮರ ಸಂಖ್ಯೆ 49

ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿಆರ್‌ಪಿಎಫ್‌ನ ನಾಲ್ವರು ಯೋಧರು ಶ್ರೀನಗರದ ಸೇನಾ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದರು. ಇದರೊಂದಿಗೆ ದಾಳಿಯಲ್ಲಿ ಹುತಾತ್ಮರಾದವರ ಸಂಖ್ಯೆ 49ಕ್ಕೆ ಏರಿದೆ.

ಹುತಾತ್ಮ ಯೋಧರಿಗೆ ಅಂತಿಮ ನಮನ

ಹುತಾತ್ಮ ಯೋಧರ ಮೃತ ದೇಹಗಳನ್ನು ವಾಯುಪಡೆಯ ವಿಶೇಷ ವಿಮಾನ
ದಲ್ಲಿ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಸಂಜೆ ತರಲಾಯಿತು. ರಾಜನಾಥ್‌ ಸಿಂಗ್‌ ಅವರು ಆ ಸಂದರ್ಭದಲ್ಲಿ ನಿಲ್ದಾಣದಲ್ಲಿ ಇದ್ದರು.

ಹೂವುಗಳಿಂದ ಅಲಂಕರಿಸಿ, ತ್ರಿವರ್ಣ ಧ್ವಜ ಹೊದಿಸಿದ್ದ ಪೆಟ್ಟಿಗೆಗಳಲ್ಲಿ ಮೃತ ದೇಹಗಳನ್ನು ಇರಿಸಲಾಗಿತ್ತು. ಪ‍್ರಧಾನಿ ನರೇಂದ್ರ ಮೋದಿ, ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರು, ಕೇಂದ್ರ ಸಂಪುಟದ ಹಿರಿಯ ಸದಸ್ಯರು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಭದ್ರತಾ ಸಲಹೆಗಾರ ಅಜಿತ್‌ ಢೊಬಾಲ್‌ ಮುಂತಾದವರು ಅಂತಿಮ ನಮನ ಸಲ್ಲಿಸಿದರು.

ಏಳು ಶಂಕಿತರು ಎನ್‌ಐಎ ವಶಕ್ಕೆ

ಸಿಆರ್‌ಪಿಎಫ್ ಯೋಧರ ಮೇಲಿನ ಆತ್ಮಾಹುತಿ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಏಳು ಮಂದಿ ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.

ಪಾಕಿಸ್ತಾನದ್ದೇ ಕೃತ್ಯ: ಜೇಟ್ಲಿ

ಪುಲ್ವಾಮಾದಲ್ಲಿನ ಭಯೋತ್ಪಾದನೆ ದಾಳಿಯು ಪಾಕಿಸ್ತಾನದ್ದೇ ಕೃತ್ಯ ಎಂಬುದನ್ನು ಹೇಳುವ ಖಚಿತವಾದ ಸಾಕ್ಷ್ಯ ಇದೆ ಎಂದು ಕೇಂದ್ರದ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಇಂತಹ ಹೀನ ಕೃತ್ಯಗಳ ಮೂಲಕ ಭಾರತವನ್ನು ಕುಸಿಯುವಂತೆ ಮಾಡಬಹುದು ಎಂದು ಪಾಕಿಸ್ತಾನ ಭಾವಿಸಿದ್ದರೆ ಅದು ಬರೇ ಹಗಲುಗನಸು. ಅಂತಹ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲಾಗುವುದು ಎಂದು ಮೋದಿ ಅವರೂ ಹೇಳಿದ್ದಾರೆ.

ರಾಯಭಾರಿ ಕರೆಸಿ ಖಂಡನೆ

ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್‌ ಸೊಹೇಲ್‌ ಮೊಹಮ್ಮದ್‌ ಅವರನ್ನು ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆ, ಕಚೇರಿಗೆ ಕರೆಸಿ ಪುಲ್ವಾಮಾ ದಾಳಿಯ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಮತ್ತು ಈ ಕ್ರಮ ಗೋಚರಿಸುವಂತಿರಬೇಕು. ಉಗ್ರರಿಗೆ ಪಾಕಿಸ್ತಾನವು ನೀಡುತ್ತಿರುವ ಬೆಂಬಲವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸೊಹೇಲ್‌ಗೆ ಹೇಳಿದ್ದಾರೆ.

ಹೈಕಮಿಷನರ್‌ಗೆ ಬುಲಾವ್‌

ಪಾಕಿಸ್ತಾನಕ್ಕೆ ಭಾರತದ ಹೈಕಮಿಷನರ್‌ ಆಗಿರುವ ಅಜಯ್‌ ಬಿಸಾರಿಯಾ ಅವರು ತಕ್ಷಣವೇ ದೆಹಲಿಗೆ ಬರುವಂತೆ ಸೂಚಿಸಲಾಗಿದೆ. ಉಗ್ರರ ದಾಳಿಯ ಬಗ್ಗೆ ಸಮಾಲೋಚನೆ ನಡೆಸುವುದು ಇದರ ಉದ್ದೇಶ ಎನ್ನಲಾಗಿದೆ.

ಇಂದು ಸಭೆ

ಉಗ್ರರ ದಾಳಿಯಿಂದ ಆಗಿರುವ ಪರಿಸ್ಥಿತಿಯ ಸಮಾಲೋಚನೆಗೆ ಶನಿವಾರ ಸರ್ವ ಪಕ್ಷ ಸಭೆ ನಡೆಸಲು ಸರ್ಕಾರ
ನಿರ್ಧರಿಸಿದೆ.

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ. ಆಡಳಿತ ಮೈತ್ರಿಕೂಟ ಮತ್ತು ವಿರೋಧ ಪಕ್ಷಗಳ ಎಲ್ಲ ಮುಖಂಡರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

***

ದಾಳಿ ನಡೆಸಿದವರಿಗೆ ಯಾವಾಗ, ಎಲ್ಲಿ, ಹೇಗೆ ಪಾಠ ಕಲಿಸಬೇಕು ಎಂಬುದರಲ್ಲಿ ಭದ್ರತಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯವಿದೆ. ಇದು ಹೊಸ ರೀತಿ, ಹೊಸ ನೀತಿಯ ಭಾರತ

–ನರೇಂದ್ರ ಮೋದಿ, ಪ್ರಧಾನಿ

ಇದು ಭಾರತದ ಮೇಲೆ, ಮಾನವೀಯತೆಯ ಮೇಲೆ ಎಸಗಿದ ಕ್ರೌರ್ಯ. ಭಾರತ ಸರ್ಕಾರ ನೀಡುವ ಯಾವುದೇ ರೀತಿಯ ತಿರುಗೇಟಿಗೆ ಇಡೀ ದೇಶ ಜತೆಗೆ ನಿಲ್ಲಲಿದೆ

–ಎಲ್‌.ಕೆ. ಅಡ್ವಾಣಿ, ಬಿಜೆಪಿ ನಾಯಕ

ಶಾಂತಿ ಮಾತುಕತೆಯ ಕಾಲ ಮುಗಿದಿದೆ. ಇದು ಪಾಠ ಕಲಿಸುವ ಕಾಲ. ಅವರ ಪ್ರಧಾನಿ (ಇಮ್ರಾನ್‌ ಖಾನ್‌) ಶಾಂತಿಯ ಮಾತನಾಡುತ್ತಿದ್ದರೆ, ಸೇನಾ ಮುಖ್ಯಸ್ಥ (ಖಮರ್‌ ಜಾವೇದ್‌ ಬಾಜ್ವಾ) ಸಮರದ ಮಾತನಾಡುತ್ತಿದ್ದಾರೆ

–ಅಮರಿಂದರ್‌ ಸಿಂಗ್‌, ಪಂಜಾಬ್‌ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.