
ಶ್ರೀನಗರ: ಭಾರಿ ಗಾಳಿ ಮತ್ತು ಹಿಮಪಾತದಿಂದಾಗಿ ಕಣಿವರ ರಾಜ್ಯ ಕಾಶ್ಮೀರದಲ್ಲಿ ತೀವ್ರವಾಗಿ ಹಾನಿಗೊಳಗಾಗಿದ್ದ ವಿದ್ಯುತ್ ಪೂರೈಕೆಯನ್ನು ಸರಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶುಕ್ರವಾರ ಹೇಳಿದ್ದಾರೆ.
‘ಕಾಶ್ಮೀರ ವಿದ್ಯುತ್ ಸರಬರಾಜು ಕಂಪನಿಗೆ(ಕೆಪಿಡಿಸಿಎಲ್) ರಾಜ್ಯದಾದ್ಯಂತ ವಿದ್ಯುತ್ ಪೂರೈಸಲು 1700 ಮೆಗಾವಾಟ್ ಅವಶ್ಯಕತೆ ಇದೆ. ಆದರೆ, 33 ಕೆವಿ ಸಾಮರ್ಥ್ಯದ ಫೀಡರ್‌ಗಳು ಸ್ಥಗಿತಗೊಂಡಿರುವುದರಿಂದ ಸದ್ಯ 100 ಮೆಗಾವಾಟ್‌ಗಿಂತ ಕಡಿಮೆ ವಿದ್ಯುತ್ ಲಭ್ಯವಾಗುತ್ತಿದೆ. ಇದನ್ನು ತುರ್ತು ಸೇವೆ ಒದಗಿಸಲು ಬಳಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
‘ವಿವಿಧ ತಂಡಗಳು ದುರಸ್ತಿ ಕಾರ್ಯದಲ್ಲಿ ನಿರತವಾಗಿವೆ. ತೀವ್ರ ಗಾಳಿಯಿಂದಾಗಿ ತಂತಿಗಳ ಮೇಲೆ ಮರಗಳೂ ಉರುಳಿ, ವಿದ್ಯುತ್ ಅಡಚಣೆ ತೀವ್ರವಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ, ಪರಿಸ್ಥಿತಿ ಸುಧಾರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ’ ಎಂದು ಅವರು ತಿಳಿಸಿದ್ದಾರೆ.
ಗುರುವಾರ ರಾತ್ರಿ ತೀವ್ರವಾಗಿ ಗಾಳಿ ಬೀಸಿದ್ದ ಪರಿಣಾಮ ಶ್ರೀನಗರ ಸೇರಿದಂತೆ ಕಣಿವೆ ರಾಜ್ಯದ ಕೆಲವು ಸ್ಥಳಗಳಲ್ಲಿ ಮರಗಳು ಉರುಳಿಬಿದ್ದಿವೆ. ವಿದ್ಯುತ್ ಕಂಬಗಳು, ಮನೆಗಳ ಚಾವಣಿಗಳಿಗೆ ಹಾನಿಯಾಗಿದೆ. ವಿದ್ಯುತ್ ತಂತಿಗಳು ತುಂಡಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.