ADVERTISEMENT

ಪ್ರಧಾನಿ ಜತೆ ಗುರುವಾರ ಕಾಶ್ಮೀರ ಮುಖಂಡರ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 20:28 IST
Last Updated 21 ಜೂನ್ 2021, 20:28 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಶ್ರೀನಗರ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಎರಡು ವರ್ಷಗಳ ಬಳಿಕ, ನಾಲ್ವರು ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ 14 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪ್ರಧಾನಿ ಮೋದಿ ಅವರನ್ನು ಗುರುವಾರ ಮೊದಲ ಬಾರಿಗೆ ಭೇಟಿಮಾಡುವ ನಿರೀಕ್ಷೆ ಇದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಸುವುದೂ ಸೇರಿದಂತೆ ರಾಜಕೀಯ ಚಟುವಟಿಕೆಗಳನ್ನು ಆರಂಭಿಸುವ ವಿಚಾರವಾಗಿ ಚರ್ಚಿಸಲು ನೀಡಿರುವ ಆಹ್ವಾನದ ಮೇರೆಗೆ ಈ ಮುಖಂಡರು ದೆಹಲಿಗೆ ಬಂದು ಪ್ರಧಾನಿ ಜತೆ ಮಾತುಕತೆ ನಡೆಸಲಿದ್ದಾರೆ. ರಾಜ್ಯದ ಸ್ವಾಯತ್ತೆತೆಯನ್ನು ಮರುಸ್ಥಾಪಿಸುವಂತೆ ಅವರು ಪ್ರಧಾನಿಯನ್ನು ಒತ್ತಾಯಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಜಮ್ಮು ಕಾಶ್ಮೀರದಲ್ಲಿ 2019ರ ಆಗಸ್ಟ್‌ 5ಕ್ಕೂ ಹಿಂದಿನ ಸ್ಥಿತಿಯನ್ನು ಮರುಸ್ಥಾಪಿಸಬೇಕು ಎಂಬುದು ನಮ್ಮ ಕಾರ್ಯಸೂಚಿಯಾಗಿದೆ’ ಎಂದು ಪೀಪಲ್ಸ್‌ ಡೆಮಾಕ್ರೆಟಿಕ್‌ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಭಾನುವಾರ ಆನ್‌ಲೈನ್‌ನಲ್ಲಿ ನಡೆದಿದ್ದ ಪಕ್ಷದ ನಾಯಕರ ಸಭೆಯಲ್ಲಿ ಹೇಳಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ನಾಯಕರು ತಿಳಿಸಿದ್ದಾರೆ.

ADVERTISEMENT

ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮುಖಂಡರೂ ಈಚೆಗೆ ಸಭೆ ನಡೆಸಿ ಇದೇ ತೀರ್ಮಾನ ಕೈಗೊಂಡಿದ್ದಾರೆ. ‘ಎರಡು ಬೇಡಿಕೆಗಳನ್ನು (ವಿಶೇಷ ಸ್ಥಾನಮಾನ ಮುಂದುವರಿಸುವುದು ಮತ್ತು ರಾಜ್ಯ ವಿಭಜನೆಯನ್ನು ರದ್ದುಪಡಿಸುವುದು) ನಾವು ಪ್ರಧಾನಿಯ ಮುಂದೆ ಮಂಡಿಸುತ್ತೇವೆ’ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ನ ಮುಖಂಡರು ತಿಳಿಸಿದ್ದಾರೆ.

ಪಿಡಿಪಿ, ಎನ್‌ಸಿ ಹಾಗೂ ಇತರ ಸ್ಥಳೀಯ ಪಕ್ಷಗಳ ಮುಖಂಡರ ಸಭೆಯು ಮಂಗಳವಾರ ನಡೆಯಲಿದೆ. ಪ್ರಧಾನಿ ಜತೆ ಮಾತುಕತೆಯ ಸಂದರ್ಭದಲ್ಲಿ ಯಾವ್ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂಬ ವಿಚಾರ ಅಲ್ಲಿ ತೀರ್ಮಾನವಾಗಲಿದೆ ಎಂದು ಪಿಡಿಪಿ ವಕ್ತಾರ ಸುಹೇಲ್‌ ಬುಖಾರಿ ತಿಳಿಸಿದ್ದಾರೆ.

ಸ್ಥಾನಮಾನ ಮರುಸ್ಥಾಪಿಸಬೇಕು:
ಜಮ್ಮು ಕಾಶ್ಮೀರದ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಒತ್ತಾಯಿಸಿದ್ದಾರೆ.

ಜಮ್ಮು ಕಾಶ್ಮೀರದ ಮುಖಂಡರು ಪ್ರಧಾನಿಯನ್ನು ಭೇಟಿಮಾಡುತ್ತಿರುವ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಅವರು, ‘ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ ಜಾರಿ ಮಾಡಿದ ಕಾನೂನನ್ನು, ಮುಂಬರುವ ಮಳೆಗಾಲದ ಅಧಿವೇಶನದಲ್ಲೇ ರದ್ದುಪಡಿಸಬೇಕು. ಅಲ್ಲಿಯ ಸಮಸ್ಯೆಗಳಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಇರುವ ದಾರಿ ಇದೊಂದೇ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಜಮ್ಮು ಕಾಶ್ಮೀರಕ್ಕೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನವನ್ನು ನೀಡಬೇಕು. ಸಂವಿಧಾನದ ಹಿತದೃಷ್ಟಿಯಿಂದ ಪ್ರಧಾನಿ ಮತ್ತು ಬಿಜೆಪಿಯು ಈ ಬೇಡಿಕೆಯನ್ನು ಅಂಗೀಕರಿಸಲೇಬೇಕು’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲ ಹೇಳಿದ್ದಾರೆ.

ಗೊಂದಲದಲ್ಲಿ ಒಕ್ಕೂಟ

ಮಾತುಕತೆಗೆ ಬರುವಂತೆ ಜಮ್ಮು ಕಾಶ್ಮೀರದ ಮುಖಂಡರಿಗೆ ಪ್ರಧಾನಿ ಮೋದಿ ಅವರು ಆಹ್ವಾನ ನೀಡಿದ್ದರೂ ಯಾವ ವಿಚಾರವಾಗಿ ಮಾತುಕತೆ ನಡೆಯಲಿದೆ ಎಂಬುದನ್ನು ಈವರೆಗೂ ತಿಳಿಸಿಲ್ಲ. ಇದು ಆರು ರಾಜಕೀಯ ಪಕ್ಷಗಳ ಗುಪ್ಕರ್‌ ಒಕ್ಕೂಟದ ಗೊಂದಲಕ್ಕೆ ಕಾರಣವಾಗದೆ.

ಮುಂದಿನ ಕಾರ್ಯಸೂಚಿಯನ್ನು ನಿರ್ಧರಿಸುವ ಸಲುವಾಗಿ ಎನ್‌ಸಿ ಮುಖ್ಯಸ್ಥ, ಗುಪ್ಕಾರ್ ಒಕ್ಕೂಟದ ಅಧ್ಯಕ್ಷರೂ ಆಗಿರುವ ಫಾರೂಕ್‌ ಅಬ್ದುಲ್ಲಾ ಅವರ ನಿವಾಸದಲ್ಲಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಎಲ್ಲಾ ಪಕ್ಷಗಳ ಮುಖಂಡರ ಸಭೆ ಕರೆಯಲಾಗಿದೆ ಎಂದು ಒಕ್ಕೂಟದ ವಕ್ತಾರ, ಸಿಪಿಎಂ ಮುಖಂಡ ಮೊಹಮ್ಮದ್‌ ಯೂಸುಫ್‌ ತಾರಿಗಾಮಿ ತಿಳಿಸಿದ್ದಾರೆ.

‘ಪ್ರಧಾನಿ ಮಾತುಕತೆಗೆ ಆಹ್ವಾನಿಸಿದ್ದಾರೆ. ಆದರೆ, ಕಾರ್ಯಸೂಚಿಯನ್ನು ತಿಳಿಸಿಲ್ಲ. ಇದನ್ನು ಅವಕಾಶ ಎಂದು ಬಳಸಿಕೊಂಡು ನಾವು ನಮ್ಮ ವಾದವನ್ನು ಮಂಡಿಸುತ್ತೇವೆ. ಇದು ಷರತ್ತುಬದ್ಧ ಮಾತುಕತೆ ಆಗಿರುವುದಿಲ್ಲ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪ್ರಧಾನಿ ಕರೆದ ಸಭೆಗೆ ಗುಪ್ಕಾರ್ ಒಕ್ಕೂಟದ ಪರವಾಗಿ ಫಾರೂಕ್‌ ಅಬ್ದುಲ್ಲಾ ಅವರೊಬ್ಬರನ್ನೇ ಕಳುಹಿಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಬೇಕು’ ಎಂದು ಮೆಹಬೂಬಾ ಮುಫ್ತಿ ಅವರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ‘ನಾವು ಪ್ರಧಾನಿ ಭೇಟಿಯ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಇತರ ಪಕ್ಷಗಳು ಅಭಿಪ್ರಾಯಪಟ್ಟಿವೆ. ಆದರೆ ನಾವು ಸಭೆಯಲ್ಲಿ ಪಾಲ್ಗೊಂಡು, ಯಾವುದೇ ಫಲಿತಾಂಶ ಬಾರದಿದ್ದರೆ ಒಕ್ಕೂಟವು ಔಚಿತ್ಯವನ್ನೇ ಕಳೆದುಕೊಳ್ಳುವ ಸಾಧ್ಯತೆಯೂ ಇದೆ’ ಎಂಬ ಅಭಿಪ್ರಾಯವೂ ಇದೆ ಎಂದು ಕೆಲವು ನಾಯಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.