
ನರೇಂದ್ರ ಮೋದಿ
(ಪಿಟಿಐ ಚಿತ್ರ)
ಏಕತಾ ನಗರ: 'ರಾಜಪ್ರಭುತ್ವದ ಸಂಸ್ಥಾನಗಳನ್ನು ಒಟ್ಟುಗೂಡಿಸಿದಂತೆ ಸರ್ದಾರ್ ವಲ್ಲಭಭಾಯಿ ಪಟೇಲ್, ಇಡೀ ಕಾಶ್ಮೀರವನ್ನು ಭಾರತದೊಂದಿಗೆ ಒಗ್ಗೂಡಿಸಲು ಬಯಸಿದ್ದರು. ಆದರೆ ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅದಕ್ಕೆ ಅವಕಾಶ ನೀಡಲಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಆಪಾದಿಸಿದ್ದಾರೆ.
ಗುಜರಾತ್‌ನ ಏಕತಾ ನಗರದಲ್ಲಿ 'ಏಕತಾ ಪ್ರತಿಮೆ' ಬಳಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ಇತಿಹಾಸ ಬರೆಯಲು ಸಮಯವನ್ನು ವ್ಯರ್ಥ ಮಾಡಬಾರದು. ಆದರೆ ಇತಿಹಾಸ ರಚಿಸಲು ನಾವು ಶ್ರಮ ವಹಿಸಬೇಕು ಎಂಬುದರಲ್ಲಿ ಸರ್ದಾರ್ ಪಟೇಲ್ ನಂಬಿಕೆ ಇಟ್ಟಿದ್ದರು' ಎಂದು ಹೇಳಿದ್ದಾರೆ.
'ಕಾಶ್ಮೀರವನ್ನು ಭಾರತದೊಂದಿಗೆ ಒಗ್ಗೂಡಿಸುವ ಸರ್ದಾರ್ ಅವರ ಬಯಕೆಯನ್ನು ಈಡೇರಲು ನೆಹರೂ ಬಿಡಲಿಲ್ಲ. ಬದಲಾಗಿ ಕಾಶ್ಮೀರವನ್ನು ವಿಭಜಿಸಲಾಯಿತು. ಪ್ರತ್ಯೇಕ ಸಂವಿಧಾನ ಹಾಗೂ ಧ್ವಜವನ್ನು ನೀಡಲಾಯಿತು. ಅಲ್ಲದೆ ಕಾಂಗ್ರೆಸ್‌ನ ತಪ್ಪಿನಿಂದಾಗಿ ದೇಶವು ದಶಕಗಳ ಕಾಲ ಬಳಲಿತ್ತು' ಎಂದು ಮೋದಿ ಆಪಾದಿಸಿದ್ದಾರೆ.
ಸರ್ದಾರ್ ಪಟೇಲ್ ರೂಪಿಸಿದ ನೀತಿ, ನಿರ್ಣಯಗಳು ಹೊಸ ಇತಿಹಾಸವನ್ನು ನಿರ್ಮಿಸಿದವು ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.
'ಸ್ವಾತಂತ್ರ್ಯದ ನಂತರ 550ಕ್ಕೂ ಹೆಚ್ಚು ರಾಜಪ್ರಭುತ್ವದ ಸಂಸ್ಥಾನಗಳನ್ನು ಒಗ್ಗೂಡಿಸುವುದು ಅಸಾಧ್ಯದ ಕೆಲಸವಾಗಿತ್ತು. ಆದರೆ ಸರ್ದಾರ್ ಪಟೇಲ್ ಅವರಿಂದ ಸಾಧ್ಯವಾಯಿತು. 'ಏಕ ಭಾರತ, ಶ್ರೇಷ್ಠ ಭಾರತ' ಕಲ್ಪನೆಯು ಅವರ ಪಾಲಿಗೆ ಮಹತ್ವದ್ದಾಗಿತ್ತು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.