ADVERTISEMENT

ಜಮ್ಮು–ಕಾಶ್ಮೀರ: ಉಗ್ರ ಸಂಘಟನೆಗಳಿಗೆ ಸ್ಥಳೀಯರ ನೇಮಕ ಪ್ರಕ್ರಿಯೆ ನಿರ್ನಾಮ

ಝುಲ್ಫೀಕರ್ ಮಜೀದ್
Published 10 ಆಗಸ್ಟ್ 2025, 23:36 IST
Last Updated 10 ಆಗಸ್ಟ್ 2025, 23:36 IST
   

ಶ್ರೀನಗರ: ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಸ್ಥಳೀಯ ಯುವಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಬಹುತೇಕ ನಿರ್ನಾಮವಾಗಿದೆ. ಕಳೆದ ಮೂರು ದಶಕಗಳಿಂದ ಸಂಘರ್ಷ ಪೀಡಿತವಾಗಿರುವ ಈ ಪ್ರದೇಶದಲ್ಲಿ ಇಂತಹ ಪರಿವರ್ತನೆ ಕಂಡುಬಂದಿರುವುದು ಗಮನಾರ್ಹ.

2017ರಲ್ಲಿ 126 ಕಾಶ್ಮೀರಿ ಯುವಕರನ್ನು ಉಗ್ರ ಸಂಘಟನೆಯ ವಿವಿಧ ಶ್ರೇಣಿಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ನಂತರದ ವರ್ಷ, ಈ ಸಂಖ್ಯೆಯಲ್ಲಿ ದಿಢೀರ್‌ ಏರಿಕೆ ಕಂಡುಬಂತು. 2018ರಲ್ಲಿ 200 ಯುವಕರು ವಿವಿಧ ಉಗ್ರ ಸಂಘಟನೆಗಳಿಗೆ ಸೇರಿದ್ದರು. ಈ ವರ್ಷ ಕೇವಲ ಒಬ್ಬ ಯುವಕ ಉಗ್ರ ಸಂಘಟನೆಗೆ ಸೇರಿದ್ದಾಗಿ ಅಂಕಿ–ಅಂಶಗಳು ಹೇಳುತ್ತವೆ.

ಗಡಿಗೆ ಬೇಲಿ ಹಾಕುವ ಮೂಲಕ ಗಡಿಯಾಚೆಯಿಂದ ನುಸುಳುವಿಕೆಗೆ ಕಡಿವಾಣ ಹಾಕಲಾಗಿದೆ. ಡ್ರೋನ್‌ಗಳ ನಿಯೋಜನೆಯಿಂದ ಕಣ್ಗಾವಲು ಹೆಚ್ಚಿಸಲಾಗಿದೆ. ಇದರಿಂದ, ದೇಶದೊಳಗೆ ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡುವುದನ್ನು ಕೂಡ ತಡೆಗಟ್ಟಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ.

ADVERTISEMENT

‘ಉಗ್ರ ಸಂಘಟನೆಗಳಿಗೆ ಯುವಕರ ನೇಮಕ ಬಹುತೇಕ ಸ್ಥಗಿತಗೊಂಡಿರುವುದು ತಂತ್ರಗಾರಿಕೆ ದೃಷ್ಟಿಯಿಂದ ಭದ್ರತಾ ಪಡೆಗಳಿಗೆ ಸಂದ ಗೆಲುವು. ಇದು, ಜಮ್ಮು–ಕಾಶ್ಮೀರದಲ್ಲಿ ಶಾಂತಿ ನೆಲಸಿದೆ ಎಂಬುದರ ಅರ್ಥವಲ್ಲ’ ಎಂದು ರಕ್ಷಣಾ ತಜ್ಞರು ಎಚ್ಚರಿಸುತ್ತಾರೆ.

‘ಅತ್ಯಂತ ಕಡಿಣವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು, ಸ್ಥಳೀಯರಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸ’ ಎಂದೂ ಹೇಳಿದ್ದಾರೆ.

ನೇಮಕಕ್ಕೆ ಕಾರಣವಾದ ಸಂಗತಿಗಳು

  • 2016ರ ಜುಲೈನಲ್ಲಿ ಉಗ್ರ ಬುರ್ಹಾನ್‌ ವಾನಿ ಹತ್ಯೆ ನಡೆಯಿತು. ಈತ ಆಗ ಕಾಶ್ಮೀರದಲ್ಲಿ ಉಗ್ರವಾದದ ಪ್ರತಿಪಾದನೆಯಲ್ಲಿ ಮುಂಚೂಣಿಯಲ್ಲಿದ್ದ. ಈತನ ಹತ್ಯೆಯು ಯುವಕರನ್ನು ಭಯೋತ್ಪಾದಕ ಸಂಘಟನೆಗಳನ್ನು ಸೇರುವುದಕ್ಕೆ ಪ್ರಚೋದಿಸಿತು

  • ಹತ್ಯೆಯಾದ ಉಗ್ರರ ಸಾಮೂಹಿಕ ಅಂತ್ಯಕ್ರಿಯೆ ಕುರಿತ ವಿಡಿಯೊಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದವು. ಕಾಶ್ಮೀರದಲ್ಲಿನ ಇಂತಹ ಬೆಳವಣಿಗೆಗಳಿಂದ
    ನಿರಾಶೆಗೊಂಡಿದ್ದ ಯುವಕರು ಉಗ್ರ ಸಂಘಟನೆಗಳನ್ನು ಸೇರಿಕೊಳ್ಳಲು ಮುಂದಾದರು

  • ಉಗ್ರರ ಅಂತ್ಯಕ್ರಿಯೆಗಳು ನಡೆದ ಸ್ಥಳಗಳೇ ಯುವಕರ ನೇಮಕಾತಿಯ ತಾಣಗಳಾಗಿ ಪರಿವರ್ತನೆಗೊಂಡವು. ಗುಂಡು ಹಾರಿಸುವುದು ಹಾಗೂ ಪ್ರಚೋದನಕಾರಿ ಭಾಷಣಗಳ ಮೂಲಕ ಯುವಕರು ಆ ಸ್ಥಳದಲ್ಲಿಯೇ ಉಗ್ರ ಸಂಘಟನೆ ಸೇರುವಂತೆ ಮಾಡಲಾಗುತ್ತಿತ್ತು

ನೇಮಕ ಪ್ರಕ್ರಿಯೆಗೆ ಕಡಿವಾಣ ಬಿದ್ದದ್ದು ಹೇಗೆ?

  • ಸಂವಿಧಾನದ 370ನೇ ವಿಧಿಯಡಿ ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ
    ವನ್ನು ಕೇಂದ್ರ ಸರ್ಕಾರ ಹಿಂಪಡೆಯಿತು. ಇದು ಈ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿತು.

  • 2019ರಿಂದ 2024ರ ನಡುವೆ ಅಂದಾಜು 1050 ಉಗ್ರರ ಹತ್ಯೆ ಮಾಡಲಾಯಿತು

  • ಗುಪ್ತಚರ ಸಂಸ್ಥೆಗಳು ಒದಗಿಸುವ ಮಾಹಿತಿ ಆಧರಿಸಿ ಉಗ್ರ ನಿಗ್ರಹ ಕಾರ್ಯಾಚರಣೆ
    ತೀವ್ರಗೊಳಿಸಲಾಯಿತು.

  • ಉಗ್ರ ಸಂಘಟನೆಗಳಿಗೆ ಹೊಸದಾಗಿ ಸೇರ್ಪಡೆಗೊಂಡವರನ್ನು ಪತ್ತೆ ಹಚ್ಚಿ ಕೆಲವೇ ದಿನಗಳು ಅಥವಾ ವಾರಗಳ ಒಳಗಾಗಿ ಅವರನ್ನು ಹತ್ಯೆ ಮಾಡಲಾಯಿತು.

  • ಉಗ್ರ ಸಂಘಟನೆಗಳನ್ನು ಸೇರುವ ಸಾಧ್ಯತೆ ಇದ್ದ/ಒಲವು ಹೊಂದಿದ್ದ ಯುವಕರ ಮೇಲೆ ಹಾಗೂ ನೇಮಕಾತಿ ಮಾಡಿಕೊಳ್ಳುವವರ ಮೇಲೆ ನಿರಂತರ ಕಣ್ಗಾವಲು ಇಡಲಾಯಿತು.

  • ತಮ್ಮ ಮಕ್ಕಳು ಉಗ್ರ ಸಂಘಟನೆ ಸೇರದಂತೆ ಮನವೊಲಿಸುವಂತೆ ಅವರ ಕುಟುಂಬಸ್ಥರಿಗೆ ವಿವರಿಸಲಾಯಿತು.

  • 2020ರಲ್ಲಿ ಕೋವಿಡ್‌–19 ಪಿಡುಗು ಕಾಣಿಸಿಕೊಂಡಿದ್ದು ಯುವಕರ ನೇಮಕಾತಿಗೆ ಕಡಿವಾಣ ಬೀಳುವುದಕ್ಕೆ ತಿರುವು ನೀಡಿತು. ಹತ್ಯೆ ಮಾಡಲಾಡ ಉಗ್ರರ ಶವಗಳನ್ನು ಅವರ ಊರಿನಿಂದ ಬಹುದೂರದಲ್ಲಿ ಅಧಿಕಾರಿಗಳೇ ಹೂಳುತ್ತಿದ್ದರು. ಇದರಿಂದ ಉಗ್ರರ ಅಂತ್ಯಕ್ರಿಯೆ ವೇಳೆ ಭಾರಿ ಸಂಖ್ಯೆಯಲ್ಲಿ ಸ್ಥಳೀಯರು ಸೇರದಂತಾಯಿತು ಹಾಗೂ ಆ ಮೂಲಕ ಯುವಕರ ನೇಮಕಕ್ಕೆ ಕಡಿವಾಣ ಬಿತ್ತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.