ADVERTISEMENT

ಶ್ರೀನಗರ:ಅಪರಾಧ ಹಿನ್ನೆಲೆ ಇರದವರಿಗೆ ಭಯೋತ್ಪಾದಕ ಸಂಘಟನೆಗಳ ನೇಮಕಾತಿಯಲ್ಲಿ ಆದ್ಯತೆ

ಪಿಟಿಐ
Published 16 ನವೆಂಬರ್ 2025, 13:44 IST
Last Updated 16 ನವೆಂಬರ್ 2025, 13:44 IST
   

ಶ್ರೀನಗರ: ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳು ತಮ್ಮ ಕಾರ್ಯಾಚರಣೆ ವಿಧಾನಗಳನ್ನು ಇತ್ತೀಚಿನ ದಿನಗಳಲ್ಲಿ ಬದಲಾಯಿಸಿವೆ. ಅದೇ ರೀತಿ, ಇಂತಹ ಸಂಘಟನೆಗಳಿಗೆ ಯುವಕರನ್ನು ನೇಮಕ ಮಾಡಿಕೊಳ್ಳುವ ವಿಧಾನವೂ ಬದಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿರದ ಹಾಗೂ ಪ್ರತ್ಯೇಕತಾ ಗುಂಪುಗಳೊಂದಿಗೆ ನಂಟು ಹೊಂದಿರದ ಯುವಜನತೆಗೆ ಭಯೋತ್ಪಾದಕ ಸಂಘಟನೆಗಳಿಗೆ ನೇಮಕ ಮಾಡುವವರು ಆದ್ಯತೆ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಭಯೋತ್ಪಾದಕ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುವಾಗ ಕಳೆದ ಎರಡು ದಶಕಗಳ ಹಿಂದೆ ಅನುಸರಿಸುತ್ತಿದ್ದ ವಿಧಾನಕ್ಕಿಂತ ಈಗಿನ ವಿಧಾನವೂ ಸಂಪೂರ್ಣ ಭಿನ್ನವಾಗಿದೆ. ಸಂಘಟನೆಗಳು ಕೂಡ ಹೊಸ ವಿಧಾನದ ಮೂಲಕ ನೇಮಕಾತಿ ಬಯಸುತ್ತಿವೆ’ ಎಂದೂ ಹೇಳಿದ್ದಾರೆ.

ADVERTISEMENT

‘ವೈಟ್‌ ಕಾಲರ್ ಉಗ್ರ ಜಾಲ’ ಕುರಿತು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಕೂಡ, ಉಗ್ರ ಸಂಘಟನೆಗಳಿಗೆ ನೇಮಕಾತಿ ಮಾಡುವಲ್ಲಿ ಆಗಿರುವ ಬದಲಾವಣೆಯನ್ನು ಗುರುತಿಸಿದ್ದಾರೆ. ಅದರಲ್ಲೂ, ದೆಹಲಿ ಸ್ಫೋಟಕ್ಕೆ ಸಂಬಂಧಿಸಿ ಬಂಧಿಸಿರುವವರನ್ನು ವಿಚಾರಣೆಗೆ ಒಳಪಡಿಸಿದಾಗ, ಆರೋಪಿತರ ಹಿನ್ನೆಲೆಯಲ್ಲಿ ಸಾಮ್ಯತೆ ಇರುವುದು ಕಂಡುಬಂದಿದೆ.

‘ಬಂಧಿತ ಆರೋಪಿಗಳಾದ ಡಾ.ಅದಿಲ್ ರಾಠರ್, ಆತನ ಸಹೋದರ ಡಾ.ಮುಜಾಫರ್ ರಾಠರ್ ಹಾಗೂ ಡಾ.ಮುಜಮ್ಮಿಲ್‌ ಗನಿ ಅವರು ಯಾವುದೇ ಅಪರಾಧಿಕ ಹಿನ್ನೆಲೆ ಹೊಂದಿಲ್ಲ ಅಥವಾ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಬಂಧಿತರ ಕುಟುಂಬದ ಸದಸ್ಯರು ಸಹ ಯಾವುದೇ ಪ್ರತ್ಯೇಕತಾವಾದಿ ಗುಂಪು ಅಥವಾ ಭಯೋತ್ಪಾದಕ ಸಂಘಟನೆ ಜೊತೆ ನಂಟು ಹೊಂದಿಲ್ಲ’ ಎಂದು ಇದೇ ಅಧಿಕಾರಿ ಹೇಳಿದ್ದಾರೆ.

‘ಕೆಂಪು ಕೋಟೆ ಬಳಿ ನವೆಂಬರ್ 10ರಂದು ಸ್ಫೋಟಗೊಂಡ ಕಾರನ್ನು ಚಲಾಯಿಸುತ್ತಿದ್ದ ಡಾ.ಉಮರ್‌ ನಬಿಗೂ ಇದೇ ಮಾತು ಅನ್ವಯಿಸುತ್ತದೆ. ಆತನ ಕುಟುಂಬಸ್ಥರು ಕೂಡ ಇಂತಹ ಯಾವುದೇ ನಂಟು ಹೊಂದಿಲ್ಲ’ ಎಂದಿದ್ದಾರೆ.

ಜಮ್ಮು–ಕಾಶ್ಮೀರದಲ್ಲಿ ಅಥವಾ ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿ ಉದ್ದಕ್ಕೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ನಿರತರಾಗಿರುವವರು ಉನ್ನತ ವ್ಯಾಸಂಗ ಮಾಡಿರುವ ಆದರೆ ಅಪರಾಧ ಹಿನ್ನೆಲೆ ಹೊಂದಿರದ ಯುವಜನತೆಯನ್ನು ಉದ್ದೇಶಪೂರ್ವಕವಾಗಿಯೇ ನೇಮಕ ಮಾಡಿಕೊಳ್ಳುತ್ತಿರಬಹುದು. ವೈದ್ಯರ ಗುಂಪೊಂದು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂಬುದನ್ನು ಊಹಿಸಲು ಸಾಧ್ಯ ಇಲ್ಲ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ಕಳೆದ ವರ್ಷದಿಂದ ಆತ್ಮಾಹುತಿ ಬಾಂಬರ್‌ಗೆ ಹುಡುಕಾಟ...

ವೈದ್ಯರ ಗುಂಪೊಂದು ಭಾಗವಾಗಿರುವ ‘ವೈಟ್‌ ಕಾಲರ್ ಉಗ್ರ ಜಾಲ’ವು ಕಳೆದ ಒಂದು ವರ್ಷದಿಂದ ಆತ್ಮಾಹುತಿ ಬಾಂಬರ್‌ಗಾಗಿ ಹುಡುಕಾಟ ನಡೆಸಿತ್ತು. ಉಗ್ರ ಜಾಲದ ಈ ಕಾರ್ಯಸೂಚಿಯನ್ನು ಡಾ.ಉಮರ್‌ ನಬಿ ಕಾರ್ಯಗತಗೊಳಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ‘ಕೆಂಪು ಕೋಟೆ ಬಳಿ ಸ್ಫೋಟಗೊಂಡ ಕಾರನ್ನು ಚಾಲನೆ ಮಾಡುತ್ತಿದ್ದ ಹಾಗೂ ಈ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ ಎನ್ನಲಾದ ಡಾ.ಉಮರ್ ಒಬ್ಬ ಕಟ್ಟಾ ಮೂಲಭೂತವಾದಿಯಾಗಿದ್ದ. ಸಂಘಟನೆಯ ಕಾರ್ಯಾಚರಣೆಗಳನ್ನು ನಡೆಸುವುದಕ್ಕೆ ಆತ್ಮಾಹುತಿ ಬಾಂಬರ್‌ನ ಅಗತ್ಯವಿದೆ ಎಂಬುದಾಗಿ ಆತ ಹೇಳುತ್ತಿದ್ದ ಎಂಬುದಾಗಿ ಬಂಧಿತ ಸಹ ಆರೋಪಿಯೊಬ್ಬ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆ. ‘ವೈದ್ಯರನ್ನು ಒಳಗೊಂಡ ಉಗ್ರರ ಜಾಲವನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕುಲ್ಗಾಮ್‌ನ ಮಸೀದಿಯೊಂದರಲ್ಲಿ ಭೇಟಿ ಮಾಡಿದ್ದೆ. ನಂತರ ಆ ಗುಂಪು ನನ್ನನ್ನು ಹರಿಯಾಣದ ಫರೀದಾಬಾದ್‌ನಲ್ಲಿರುವ ಅಲ್‌ ಫಲಾಹ್‌ ವಿಶ್ವವಿದ್ಯಾಲಯದ ಬಾಡಿಗೆ ಕೋಣೆಯೊಂದಕ್ಕೆ ಕರೆದುಕೊಂಡು ಹೋಯಿತು ಎಂದು ಆತ ತಿಳಿಸಿದ್ದಾನೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ‘ನಿಷೇಧಿತ ಜೈಷ್‌–ಎ–ಮೊಹಮ್ಮದ್‌ ಸಂಘಟನೆ ಪರವಾಗಿ ನಾನು ಸ್ಥಳೀಯವಾಗಿ ಕೆಲಸ ಮಾಡಬೇಕು ಎಂಬುದಾಗಿ ಬಂಧಿತ ವೈದ್ಯರು ಗುಂಪು ಬಯಸಿತ್ತು. ಆತ್ಮಾಹುತಿ ಬಾಂಬರ್ ಆಗುವಂತೆ ನನ್ನ ಮನವೊಲಿಸಲು ಉಮರ್‌ ಹಲವು ತಿಂಗಳು ಪ್ರಯತ್ನಿಸಿದ್ದ ಎಂಬುದಾಗಿ ಬಂಧಿತ ಮಾಹಿತಿ ನೀಡಿದ್ದಾನೆ’ ಎಂದಿದ್ದಾರೆ. ‘ತನ್ನ ಆರ್ಥಿಕ ಸ್ಥಿತಿ ಸರಿ ಇಲ್ಲ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಇಸ್ಲಾಂ ನಿಷೇಧಿಸುತ್ತದೆ ಎಂಬ ಕಾರಣ ನೀಡಿ ಆ ವ್ಯಕ್ತಿ ಆತ್ಮಾಹುತಿ ಬಾಂಬರ್ ಆಗುವುದಕ್ಕೆ ಒಪ್ಪಲಿಲ್ಲ. ಹೀಗಾಗಿ ‘ಉಗ್ರ ಜಾಲ’ದ ಯೋಜನೆ ಕಳೆದ ಏಪ್ರಿಲ್‌ನಲ್ಲಿ ವಿಫಲಗೊಂಡಿತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.