ADVERTISEMENT

ಕಾಶ್ಮೀರಿ ಪಂಡಿತ ಸಹೋದರರ ಮೇಲೆ ಉಗ್ರರ ದಾಳಿ: ಅಣ್ಣ ಸಾವು, ತಮ್ಮ ಆಸ್ಪತ್ರೆಗೆ

ಪಿಟಿಐ
Published 16 ಆಗಸ್ಟ್ 2022, 20:18 IST
Last Updated 16 ಆಗಸ್ಟ್ 2022, 20:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮು–ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೋಟಿಪೊರಾ ಪ್ರದೇಶದಲ್ಲಿ ಉಗ್ರಗಾಮಿಗಳು ಮಂಗಳವಾರ ನಡೆಸಿದ ಗುಂಡಿನ ದಾಳಿಯಲ್ಲಿ ಕಾಶ್ಮೀರ ಪಂಡಿತರೊಬ್ಬರು ಸಾವನ್ನಪ್ಪಿದ್ದು, ಅವರ ಸಹೋದರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮೃತ ವ್ಯಕ್ತಿಯನ್ನು ಸುನೀಲ್‌ಕುಮಾರ್‌ ಹಾಗೂ ಗಾಯಗೊಂಡವರನ್ನು ಪಿಂಟು ಕುಮಾರ್‌ ಎಂದು ಗುರುತಿಸಲಾಗಿದೆ’ ಎಂದು ಪೊಲೀಸ್ ಇಲಾಖೆ ವಕ್ತಾರರೊಬ್ಬರು ತಿಳಿಸಿದ್ದಾರೆ.

‘ಚೋಟಿಪೊರಾ ಪ್ರದೇಶದಲ್ಲಿರುವ ತಮ್ಮ ಸೇಬುಹಣ್ಣಿನ ತೋಟದಲ್ಲಿ ಈ ಇಬ್ಬರು ಕೆಲಸ ಮಾಡುತ್ತಿದ್ದ ವೇಳೆ, ಸಮೀಪದಿಂದಲೇಉಗ್ರರು ಇಬ್ಬರ ಮೇಲೆ ಗುಂಡು ಹಾರಿಸಿದ್ದು, ಸುನೀಲ್‌ ಕುಮಾರ್ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಪಿಂಟು ಕುಮಾರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ದಾಳಿಯ ಹೊಣೆಯನ್ನು ಈ ವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಪೊಲೀಸರು ಹಾಗೂ ಭದ್ರತಾ ಪಡೆಗಳು ಘಟನಾ ಪ್ರದೇಶವನ್ನು ಸುತ್ತುವರಿದಿದ್ದು, ದಾಳಿಕೋರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ ಎಂದೂ ತಿಳಿಸಿದ್ದಾರೆ.

ದಾಳಿ ಹೆಚ್ಚಳ: ವಲಸೆ ಕಾರ್ಮಿಕರು ಹಾಗೂ ಸ್ಥಳೀಯರಲ್ಲದವರನ್ನು ಗುರಿಯಾಗಿಸಿ ಕಳೆದ ಅಕ್ಟೋಬರ್‌ನಿಂದ ಉಗ್ರರು ದಾಳಿಯನ್ನು ಹೆಚ್ಚಿಸಿದ್ದಾರೆ.

‘ಆರ್‌ಎಸ್‌ಎಸ್‌, ಗುಪ್ತಚರ ಸಂಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸುವವರು ಹಾಗೂ ಮೂಲ ಕಾಶ್ಮೀರಿಗಳಲ್ಲದವರುಜಮ್ಮು–ಕಾಶ್ಮೀರದಲ್ಲಿ ಆಸ್ತಿಗಳನ್ನು ಖರೀದಿ ಮಾಡಿದಲ್ಲಿ ಅವರನ್ನು ‘ಆಕ್ರಮಣ’ಕಾರರು ಎಂದೇ ಭಾವಿಸಿ, ಅವರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತದೆ’ ಎಂದು ಟಿಆರ್‌ಎಫ್‌ ಎಚ್ಚರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.