ADVERTISEMENT

ಕಚ್ಚತೀವು ದ್ವೀಪಕ್ಕೆ ಡಿಸ್ಸನಾಯಕೆ ಭೇಟಿ: ತ.ನಾಡು ಮೀನುಗಾರರಲ್ಲಿ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 15:43 IST
Last Updated 2 ಸೆಪ್ಟೆಂಬರ್ 2025, 15:43 IST
ಅನುರಾ ಕುಮಾರ ಡಿಸ್ಸನಾಯಕೆ
ಅನುರಾ ಕುಮಾರ ಡಿಸ್ಸನಾಯಕೆ   

ಚೆನ್ನೈ: ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ಡಿಸ್ಸನಾಯಕೆ ಅವರು ಸೋಮವಾರ ಕಚ್ಚತೀವು ದ್ವೀಪ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಈ ದ್ವೀಪಕ್ಕೆ ಕಾಲಿಟ್ಟ ಲಂಕಾದ ಮೊದಲ ಅಧ್ಯಕ್ಷ ಇವರಾಗಿದ್ದು, ಅನುರಾ ಅವರ ಈ ನಡೆಯು ಭಾರತದ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆಗಳಿದೆ.

1974ರಲ್ಲಿ ಭಾರತವು ಶ್ರೀಲಂಕಾಗೆ ಬಿಟ್ಟುಕೊಟ್ಟಿದೆ ಎನ್ನಲಾಗುವ ಕಚ್ಚತೀವು ದ್ವೀಪಕ್ಕೆ ಅನುರಾ ದಿಢೀರ್‌ ಭೇಟಿ ನೀಡಿದ್ದಾರೆ. ಕಚ್ಚತೀವು ದ್ವೀಪವನ್ನು ಮರಳಿ ಪಡೆಯಬೇಕು ಎಂದು ತಮಿಳುನಾಡು ಸರ್ಕಾರ, ಮೀನುಗಾರರು, ರಾಜಕೀಯ ನಾಯಕರು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುತ್ತಿರುವಂತೆಯೇ ಲಂಕಾ ಅಧ್ಯಕ್ಷರ ಈ ನಡೆ ಮಹತ್ವ ಪಡೆದಿದೆ. 

ದ್ವೀಪಕ್ಕೆ ಭೇಟಿ ನೀಡುವ ಮುನ್ನ, ಶ್ರೀಲಂಕಾದ ಉತ್ತರ ಭಾಗದಲ್ಲಿರುವ ತಮಿಳು ಜನರನ್ನು ಕುರಿತು ಮಾತನಾಡಿದ ಅನುರಾ, ‘ಕಚ್ಚತೀವು ನಮ್ಮ ನೆಲ. ಇದು ಶ್ರೀಲಂಕಾ ಜನರಿಗೆ ಸೇರಿದ್ದು. ಈ ನೆಲವನ್ನು ಯಾರೂ ಬಲವಂತವಾಗಿ ಕಸಿದುಕೊಳ್ಳಲು ನಾವು ಬಿಡುವುದಿಲ್ಲ’ ಎಂದೂ ಪ್ರತಿಪಾದಿಸಿದ್ದಾರೆ. 

ADVERTISEMENT

ಸೇನಾ ಪಡೆ ಸಿಬ್ಬಂದಿಯ ಜತೆಗೆ ಕಚ್ಚತೀವು ದ್ವೀಪಕ್ಕೆ ತೆರಳಿ, ಅಲ್ಲಿರುವ ಸಂತ ಆ್ಯಂಟನಿ ಚರ್ಚ್‌ಗೂ ಅವರು ಭೇಟಿ ನೀಡಿದ್ದಾರೆ. 

ತಪ್ಪು ಕಲ್ಪನೆ: ಕಚ್ಚತೀವುಗೆ ಅನುರಾ ಅವರ ಭೇಟಿ ಕುರಿತಂತೆ ರಾಜತಾಂತ್ರಿಕ ವ್ಯವಹಾರಗಳ ತಜ್ಞರಾದ ಎನ್. ಸತ್ಯಮೂರ್ತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಕಚ್ಚತೀವು ಭೇಟಿ ಮೂಲಕ ಲಂಕಾದ ತಮಿಳರು, ಮೀನುಗಾರರನ್ನು ಓಲೈಸಬಹುದು ಎಂದುಕೊಂಡರೆ ಅದು ಅನುರಾ ಅವರ ತಪ್ಪು ಕಲ್ಪನೆ ಆಗುತ್ತದೆ’ ಎಂದು ಹೇಳಿದ್ದಾರೆ. 

ಮೀನುಗಾರರ ಭದ್ರತೆ ಲೆಕ್ಕಿಸದೆ ಭಾರತವು ಕಚ್ಚತೀವು ವಿಚಾರದಲ್ಲಿ ಮೌನವಹಿಸಿದೆ. ಈ ಸಮಸ್ಯೆಯನ್ನು ಸರ್ಕಾರ ಪರಿಹರಿಸಲೇಬೇಕು. 
ಎನ್‌.ಜೆ.ಬೋಸ್‌ ತಮಿಳುನಾಡು ಮೀನುಗಾರರ ಕಲ್ಯಾಣ ಸಂಘದ ಕಾರ್ಯದರ್ಶಿ 

ತಮಿಳುನಾಡು ಮೀನುಗಾರರಿಗೆ ಆತಂಕ

ಅನುರಾ ಅವರ ಕಚ್ಚತೀವು ಭೇಟಿಯು ತಮಿಳುನಾಡಿನ ಮೀನುಗಾರರಲ್ಲಿ ಆತಂಕ ಹೆಚ್ಚಿಸಿದೆ. ರಾಮನಾಥಪುರಂ ಪುದಕೊಟ್ಟೈ ತಾಂಜಾವೂರ್‌ ಹಾಗೂ ನಾಗಪತ್ತಿನಂ ಜಿಲ್ಲೆಗಳಲ್ಲಿನ ಮೀನುಗಾರರ ಒಕ್ಕೂಟದ ಪ್ರತಿನಿಧಿಗಳು ಈ ಬಗ್ಗೆ ಮಾತನಾಡಿದ್ದಾರೆ. ‘ಲಂಕಾ ಅಧ್ಯಕ್ಷರು ಕಚ್ಚತೀವುಗೆ ಭೇಟಿ ನೀಡಿದ್ದನ್ನೇ ಅಸ್ತ್ರವಾಗಿಸಿಕೊಂಡು ಲಂಕಾದ ನೌಕಾಪಡೆಗಳು ಕಚ್ಚತೀವು ಬಳಿ ಮೀನುಗಾರಿಕೆ ಮಾಡುವ ಭಾರತೀಯ ಮೀನುಗಾರರ ಮೇಲೆ ದಾಳಿ ಮಾಡಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಲಂಕಾ ಅಧ್ಯಕ್ಷರ ಜತೆಗೆ ಮಾತುಕತೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.