ADVERTISEMENT

‘ಕವಚ’ ಅಳವಡಿಕೆ ಕಾರ್ಯ ನಡೆಯುತ್ತಿದೆ: ರೈಲ್ವೆ ಮಾಹಿತಿ

ಒಡಿಶಾದಲ್ಲಿ ಅಪಘಾತ ಸಂಭವಿಸಿದ ಮಾರ್ಗದಲ್ಲಿ ಅಳವಡಿಸಿರಲಿಲ್ಲ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 19:56 IST
Last Updated 3 ಜೂನ್ 2023, 19:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಾಲಸೋರ್‌ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಪ ಘಾತವು, ರೈಲುಗಳು ಡಿಕ್ಕಿಯಾಗುವುದನ್ನು ಸ್ವಯಂಚಾಲಿತವಾಗಿ ತಡೆಯುವ ‘ಕವಚ’ ವ್ಯವಸ್ಥೆಯತ್ತ ಗಮನ ಸೆಳೆದಿದೆ.

ರೈಲುಗಳ ಅಪಘಾತ ಸಂಭವಿಸಿದ ಈ ಮಾರ್ಗದಲ್ಲಿ ‘ಕವಚ’ ಸುರಕ್ಷಾ ವ್ಯವಸ್ಥೆಯನ್ನು ಅಳವಡಿಸಿರಲಿಲ್ಲ. ಆದರೆ, ಎಲ್ಲ ಮಾರ್ಗಗಳಲ್ಲಿ ಈ ವ್ಯವಸ್ಥೆ ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಅಪಘಾತವು ‘ಕವಚ’ ವ್ಯವಸ್ಥೆ ಇಲ್ಲದ ಕಾರಣಕ್ಕೆ ಸಂಭವಿಸಿಲ್ಲ. ಹಳಿಗಳನ್ನು ಬದಲಾಯಿಸುವುದಕ್ಕೆ ಸಂಬಂಧಿಸಿದ ವ್ಯವಸ್ಥೆಯಲ್ಲಿನ ಲೋಪವೇ ಅಪಘಾತಕ್ಕೆ ಕಾರಣ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ.

ADVERTISEMENT

‘ಹಳಿಗಳಲ್ಲಿ ಯಾವುದೇ ದೋಷಗಳಿಲ್ಲ. ಅವಘಡ ಕುರಿತು ತನಿಖೆಗೆ ಅದೇಶಿಸಲಾಗಿದ್ದು, ಅದು ಪೂರ್ಣಗೊಂಡ ನಂತರ ಕಾರಣ ತಿಳಿಯಲಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪರೀಕ್ಷಾರ್ಥ ಪ್ರಯೋಗ: ‘ಕವಚ’ ಸುರಕ್ಷಾ ವ್ಯವಸ್ಥೆಯನ್ನು ಸಂಶೋಧನೆ, ವಿನ್ಯಾಸ ಹಾಗೂ ಮಾನಕ ಸಂಸ್ಥೆ (ಆರ್‌ಡಿಎಸ್‌ಒ) ಅಭಿವೃದ್ಧಿಪಡಿಸಿದೆ. ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ₹ 16.88 ಕೋಟಿ ವೆಚ್ಚವಾಗಿದೆ.

ಈ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗಗಳು ಯಶಸ್ವಿಯಾಗಿವೆ. ದಕ್ಷಿಣ ಮಧ್ಯ ರೈಲ್ವೆಯ ಲಿಂಗಂಪಲ್ಲಿ–ವಿಕಾರಾಬಾದ್–ವಾಡಿ, ವಿಕಾರಾ ಬಾದ್–ಬೀದರ್ ಮಾರ್ಗಗಳಲ್ಲಿ ಈ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ ಯಾಗಿದೆ. ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯ 1,455 ಕಿ.ಮೀ. ಉದ್ದದ ಮಾರ್ಗದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಮುಂದಿನ ವರ್ಷ ನವದೆಹಲಿ–ಹೌರಾ ಮತ್ತು ನವದೆಹಲಿ–ಮುಂಬೈ ನಡುವಿನ ಒಟ್ಟು 2,951 ಕಿ.ಮೀ. ಉದ್ದದ ಮಾರ್ಗಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲು ಟೆಂಡರ್‌ ಕರೆಯಲಾಗಿದೆ.

35,736 ಕಿ.ಮೀ. ಉದ್ದ ಮಾರ್ಗ ದಲ್ಲಿ ‘ಕವಚ’ ವ್ಯವಸ್ಥೆ ಅಳವಡಿಕೆಗೆ ಮಂಜೂರಾತಿ ನೀಡ ಲಾಗಿದೆ. ನಂತರ, 6 ಸಾವಿರ ಕಿ.ಮೀ. ಮಾರ್ಗದಲ್ಲಿ ಅಳವಡಿಸಲು ಯೋಜಿಸಲಾಗಿದೆ ಎಂದು ರೈಲ್ವೆ ಮೂಲಗಳು ಹೇಳಿವೆ.

‘ಕವಚ’ದ ವೈಶಿಷ್ಟ್ಯಗಳು

l ರೈಲು ರೆಡ್‌ ಸಿಗ್ನಲ್‌ ದಾಟಿ ಹೋದಾಗ, ಈ ವ್ಯವಸ್ಥೆಯು ಚಾಲಕನಿಗೆ ಎಚ್ಚರಿಕೆ ಸಂದೇಶ ನೀಡುತ್ತದೆ.

l ಮಾರ್ಗದಲ್ಲಿ ಮತ್ತೊಂದು ರೈಲು ಸಂಚರಿಸುತ್ತಿದ್ದರೆ, ನಿರ್ದಿಷ್ಟ ಅಂತರವಿರುವಾಗಲೇ ಆ ರೈಲನ್ನು ಗುರುತಿಸುವ ಈ ವ್ಯವಸ್ಥೆ ತಕ್ಷಣವೇ ಬ್ರೇಕ್‌ ಹಾಕಿ ರೈಲು ನಿಲ್ಲುವಂತೆ ಮಾಡುತ್ತದೆ.

l ರೈಲುಗಳ ಮಧ್ಯೆ ಮುಖಾಮುಖಿ ಡಿಕ್ಕಿ ತಪ್ಪಿಸುತ್ತದೆ.

l ರೈಲ್ವೆ ಕ್ರಾಸಿಂಗ್ ಗೇಟ್‌ಗಳು ಸಮೀಪಿಸುತ್ತಿದ್ದಂತೆಯೇ ಸ್ವಯಂಚಾಲಿತವಾಗಿ ಜೋರಾದ ಶಿಳ್ಳೆ ಹೊಡೆದು ಎಚ್ಚರಿಕೆಯ ಸಂದೇಶ ರವಾನಿಸುತ್ತದೆ.

l ಚಾಲಕ ಬ್ರೇಕ್‌ಗಳನ್ನು ಹಾಕಲು ವಿಫಲನಾದ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಬ್ರೇಕ್‌ ಹಾಕಿ ರೈಲಿನ ವೇಗವನ್ನು ನಿಯಂತ್ರಿಸುತ್ತದೆ

l ಅತ್ಯಂತ ದಟ್ಟವಾದ ಮಂಜಿನ ವಾತಾವರಣದಲ್ಲೂ ರೈಲು ಸುರಕ್ಷಿತವಾಗಿ ಚಲಿಸಲು ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.