ADVERTISEMENT

ಲಡಾಖ್‌ನ ನೂತನ ಲೆ. ಗವರ್ನರ್ ಆಗಿ ಕವಿಂದರ್ ಗುಪ್ತಾ ಪ್ರಮಾಣವಚನ

ಪಿಟಿಐ
Published 18 ಜುಲೈ 2025, 7:21 IST
Last Updated 18 ಜುಲೈ 2025, 7:21 IST
   

ಲೆಹ್/ಜಮ್ಮು: ಬಿಜೆಪಿಯ ಹಿರಿಯ ನಾಯಕ ಕವಿಂದರ್ ಗುಪ್ತಾ ಅವರು ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕವಿಂದರ್ ಅವರನ್ನು ಲೆಫ್ಟಿಂನೆಂಟ್ ಗವರ್ನರ್ ಆಗಿ 4 ದಿನಗಳ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕ ಮಾಡಿದ್ದರು.

ಕವಿಂದರ್ ಅವರಿಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಮುಖ್ಯ ನ್ಯಾಯಮೂರ್ತಿಗಳಾದ ಅರುಣ್ ಪಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು. ಲೆಹ್‌ನ ಲಡಾಕ್ ರಾಜನಿವಾಸದಲ್ಲಿ ಕಾರ್ಯಕ್ರಮ ನಡೆಯಿತು.

ADVERTISEMENT

ಗುಪ್ತಾ ಅವರು ಲಡಾಖ್‌ನ ಮೂರನೇ ಲೆಫ್ಟಿನೆಂಟ್ ಗವರ್ನರ್ ಆಗಿದ್ದಾರೆ.

2019ರರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ಇಬ್ಭಾಗಿಸಿದ ಬಳಿಕ ಆರ್‌.ಕೆ. ಮಥೂರ್ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕವಾಗಿದ್ದರು. 2024ರ ಫೆಬ್ರುವರಿ 19ರಂದು ಬ್ರಿಗೇಡಿಯರ್ ಬಿ.ಡಿ. ಮಿಶ್ರಾ ಅವರು ಎರಡನೇ ಲೆಫ್ಟಿನೆಂಟ್ ಗವರ್ನರ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಗುಪ್ತಾ ಅವರು ಬಿಜೆಪಿ ಪಕ್ಷ ಮತ್ತು ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ.

2018ರಲ್ಲಿ ಬಿಜೆಪಿ-ಪಿಡಿಪಿ ಸರ್ಕಾರದ ಅವಧಿಯಲ್ಲಿ ಅವರು 51 ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರದ ಉಪಮುಖ್ಯಮಂತ್ರಿಯಾಗಿದ್ದರು. ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರಕ್ಕೆ ಬಿಜೆಪಿ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಾಗ ಅವರು ಹುದ್ದೆಯನ್ನು ತೊರೆದರು.

ಜಮ್ಮು ನಗರದ ಜಾನಿಪುರ ಪ್ರದೇಶದ 66 ವರ್ಷದ ಗುಪ್ತಾ ಅವರು 2005ರಿಂದ 2010ರವರೆಗೆ ಸತತ ಮೂರು ಬಾರಿ ಜಮ್ಮು ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. 1993ರಿಂದ1998 ರವರೆಗೆ ಸತತ ಎರಡು ಬಾರಿ ಜಮ್ಮು ಮತ್ತು ಕಾಶ್ಮೀರದ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ (ಬಿಜೆವೈಎಂ) ಮುಖ್ಯಸ್ಥರಾಗಿದ್ದರು.

ಗುಪ್ತಾ ಅವರು 2014ರ ವಿಧಾನಸಭಾ ಚುನಾವಣೆಯಲ್ಲಿ ಗಾಂಧಿ ನಗರ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ಸಚಿವರಾಗಿರುವ ಕಾಂಗ್ರೆಸ್‌ನ ರಮಣ್ ಭಲ್ಲಾ ಅವರನ್ನು ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.