ರುದ್ರಪ್ರಯಾಗ (ಉತ್ತರಾಖಂಡ): ಕೇದಾರನಾಥದಿಂದ ಗುಪ್ತಕಾಶಿಗೆ ಸಾಗುತ್ತಿದ್ದ ಹೆಲಿಕಾಪ್ಟರ್ ಗೌರಿಕುಂಡ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಪತನಗೊಂಡಿದ್ದು, ಪೈಲಟ್, ಹೆಣ್ಣುಮಗು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.
ಪ್ರತಿಕೂಲ ಹವಾಮಾನ ಅವಘಡಕ್ಕೆ ಕಾರಣವಾಗಿದೆ. ‘ಆರ್ಯನ್ ಏವಿಯೇಷನ್’ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದ ‘ಬೆಲ್ 407’ ಹೆಲಿಕಾಪ್ಟರ್ ಗೌರಿಕುಂಡ ಮತ್ತು ತ್ರಿಯುಗಿ ನಾರಾಯಣ ನಡುವೆ ಪತನಗೊಂಡಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಭಸ್ಮವಾಗಿದೆ.
ರುದ್ರಪ್ರಯಾಗ್ ಜಿಲ್ಲೆಯ ಪ್ರಕೃತಿ ವಿಕೋಪ ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಜ್ವಾರ್ ಅವರ ಪ್ರಕಾರ, ‘ಪ್ರತಿಕೂಲ ಹವಾಮಾನದ ಕಾರಣ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಇದು, ಅಪಘಾತಕ್ಕೆ ಕಾರಣವಾಗಿರಬಹುದು.’
‘ಮೃತರಲ್ಲಿ 2 ವರ್ಷದ ಮಗು ಸೇರಿ ಆರು ಪ್ರಯಾಣಿಕರು, ಒಬ್ಬ ಸಿಬ್ಬಂದಿ ಸೇರಿದ್ದಾರೆ. ಹೆಲಿಕಾಪ್ಟರ್ ಬೆಳಿಗ್ಗೆ 5.10ಕ್ಕೆ ನಿರ್ಗಮಿಸಿದ್ದು, ಕೇದಾರನಾಥ ಹೆಲಿಪ್ಯಾಡ್‌ನಲ್ಲಿ 5.18ಕ್ಕೆ ಇಳಿಸಲಾಗಿತ್ತು. ಮತ್ತೆ 5.19ಕ್ಕೆ ಅಲ್ಲಿಂದ ಟೇಕ್‌ಆಫ್ ಆಗಿತ್ತು’ ಎಂದು ತಿಳಿಸಿದ್ದಾರೆ.
ಮೃತರು ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶದವರು. ಪೈಲಟ್ ರಾಜವೀರ್ ಸಿಂಗ್ ಚೌಹಾಣ್ ಈ ಹಿಂದೆ ಭಾರತೀಯ ಸೇನೆಯಲ್ಲಿ 15 ವರ್ಷ ಕೆಲಸ ಮಾಡಿದ್ದು, ವಿಸ್ತೃತ ಸೇವಾ ಅನುಭವ ಹೊಂದಿದ್ದರು.
ಸದ್ಯ, ಜೈಪುರದ ನಿವಾಸಿಯಾಗಿರುವ ಚೌಹಾಣ್ ಅವರು ಆರ್ಯನ್ ಏವಿಯೇಷನ್ ಸಂಸ್ಥೆಯಲ್ಲಿ 2024ರ ಅಕ್ಟೋಬರ್‌ನಿಂದಲೂ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಪೈಲಟ್ ಹೊರತುಪಡಿಸಿ ಮಹಾರಾಷ್ಟ್ರದ ಉದ್ಯಮಿ ರಾಜಕುಮಾರ್ ಜೈಸ್ವಾಲ್, ಅವರ ಪತ್ನಿ ಶ್ರದ್ಧಾ, ಇವರ ಪುತ್ರಿ ಕಾಶಿ (2), ಬದರಿನಾಥ ದೇಗುಲ ಟ್ರಸ್ಟ್ ಸದಸ್ಯ ವಿಕ್ರಮ್ ಸಿಂಗ್ ರಾವುತ್, ಉತ್ತರ ಪ್ರದೇಶದ ವಿನೋದಾ ದೇವಿ (66), ತುಷ್ಟಿಸಿಂಗ್ (19) ಮೃತಪಟ್ಟಿದ್ದಾರೆ.
ತನಿಖೆ: ‘ಹೆಲಿಕಾಪ್ಟರ್ ಅವಘಡದ ಕುರಿತು ವೈಮಾನಿಕ ಅಪಘಾತ ತನಿಖಾ ಮಂಡಳಿ (ಎಎಐಬಿ) ತನಿಖೆ ನಡೆಸಲಿದೆ’ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಿಸಿದೆ.
ಮುಂಜಾಗ್ರತಾ ಕ್ರಮವಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಯಾತ್ರಾ ಸ್ಥಳಗಳಾದ ಕೇದಾರನಾಥ, ಬದರಿನಾಥ, ಯಮುನೋತ್ರಿ, ಗಂಗೋತ್ರಿಗೆ ಎರಡು ದಿನ ಹೆಲಿಕಾಪ್ಟರ್ ಪ್ರಯಾಣ ರದ್ದುಪಡಿಸಿದೆ.
ಈ ವರ್ಷದಲ್ಲಿನ ಐದನೇ ಅಪಘಾತ
ಮುಂಬೈ: ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದ ಹೆಲಿಕಾಪ್ಟರ್ ದುರಂತದ ಐದನೇ ಪ್ರಕರಣ ಇದಾಗಿದೆ.
ಹಿಂದಿನ ಅವಗಢಗಳ ವಿವರ ಹೀಗಿದೆ:
ಮೇ 8: ಗಂಗೋತ್ರಿ ಧಾಮ್‌ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಗಂಗಾನಾನಿ ನಾಗರಾಜ ದೇವಸ್ಥಾನದ ಬಳಿ ಬೆಟ್ಟಪ್ರದೇಶದಲ್ಲಿ ಅಪಘಾತಕ್ಕೀಡಾಗಿತ್ತು. 6 ಮಂದಿ ಮೃತಪಟ್ಟಿದ್ದರು.
ಮೇ 12: ಪೈಲಟ್‌ನ ನಿಯಂತ್ರಣ ತಪ್ಪಿದ್ದ ಹೆಲಿಕಾಪ್ಟರ್ ಬದರೀನಾಥ ಹೆಲಿಪ್ಯಾಡ್‌ನಿಂದ ಟೇಕ್ ಆಫ್ ಆಗಿದ್ದ ಕೆಲ ಹೊತ್ತಿನಲ್ಲೇ ಅಪಘಾತಕ್ಕೀಡಾಗಿದ್ದು ನಿಲುಗಡೆ ಮಾಡಿದ್ದ ವಾಹನಗಳಿಗೆ ಅಪ್ಪಳಿಸಿತ್ತು. ಜೀವಹಾನಿ ಆಗಿರಲಿಲ್ಲ.
ಮೇ 17: ಹೃಷಿಕೇಶದ ಎಐಐಎಂಸ್ ನಿಯೋಜಿಸಿದ್ದ ಏರ್ ಆಂಬುಲೆನ್ಸ್ ಕೇದಾರನಾಥ ಹೆಲಿಪ್ಯಾಡ್ ಬಳಿ ಅಪಘಾತಕ್ಕೆ ಈಡಾಗಿತ್ತು. ಹೆಲಿಕಾಪ್ಟರ್ ಹಿಂಬದಿಯ ಭಾಗ ನೆಲಕ್ಕೆ ತಗುಲಿದ್ದು ಅಪಘಾತಕ್ಕೆ ಕಾರಣವಾಗಿತ್ತು. ಆಗ ಹೆಲಿಕಾಪ್ಟರ್‌ನಲ್ಲಿ ಪೈಲಟ್ ವೈದ್ಯ ಮತ್ತು ಶುಶ್ರೂಷಕ ಇದ್ದು ಅದೃಷ್ಟವಶಾತ್ ಪಾರಾಗಿದ್ದರು.
ಜೂನ್ 7: ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಗುಪ್ತಕಾಶಿ–ಗೌರಿಕುಂಡ ಹೆದ್ದಾರಿಯಲ್ಲಿ ತಾಂತ್ರಿಕ ದೋಷದ ಕಾರಣ ತುರ್ತು ಭೂ ಸ್ಪರ್ಶ ಮಾಡಿತ್ತು. ಪೈಲಟ್ ಗಾಯಗೊಂಡಿದ್ದು ಐವರು ಯಾತ್ರಿಕರು ಪಾರಾಗಿದ್ದರು.
ತಜ್ಞರ ಸಮಿತಿ ರಚನೆ
ಡೆಹ್ರಾಡೂನ್: ಚಾರ್‌ಧಾಮ್ ಯಾತ್ರೆಯ ಮಾರ್ಗದಲ್ಲಿ ಇತ್ತೀಚೆಗೆ ಆಗಾಗ್ಗೆ ಹೆಲಿಕಾಪ್ಟರ್ ಅಪಘಾತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ನಿರ್ವಹಣೆ ಮತ್ತು ಸುರಕ್ಷತಾ ಕ್ರಮ ಕುರಿತು ಹೊಸ ಮಾರ್ಗಸೂಚಿ ಹೊರಡಿಸಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ. ಈ ಕುರಿತು ಅಗತ್ಯ ಸಲಹೆ ನೀಡಲು ತಜ್ಞರ ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.
ಎಲ್ಲ ಪ್ರಯಾಣಿಕರ ಸುರಕ್ಷತೆ ಕುರಿತು ಖಾತರಿಪಡಿಸಿಕೊಂಡ ನಂತರವೇ ಹೆಲಿಕಾಪ್ಟರ್ ಸೇವೆ ಆರಂಭವಾಗಲಿದೆ. ಯಾತ್ರಿಗಳ ಸುರಕ್ಷತೆಯನ್ನು ಕಡೆಗಣಿಸಲಾಗದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.