ರುದ್ರಪ್ರಯಾಗ: ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಟೇಕ್–ಆಫ್ ಆಗುವಾಗ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲೇ ತುರ್ತು ಭೂಸ್ಪರ್ಶ ಮಾಡಿದ ಘಟನೆಯು ಶನಿವಾರ ರುದ್ರಪ್ರಯಾಗದಲ್ಲಿ ಜರುಗಿದೆ.
ಘಟನೆಯಲ್ಲಿ ಯಾವುದೇ ತೊಂದರೆಯಾಗಿಲ್ಲ. ಎಲ್ಲಾ ಪ್ರಯಾಣಿಕರು ಹಾಗೂ ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಹೆದ್ದಾರಿ ಮಧ್ಯದಲ್ಲಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಘಟನೆ ನಡೆದ ಸ್ಥಳದ ಬಳಿಯೇ ದೊಡ್ಡ ಕಟ್ಟಡವಿದ್ದು ಕೂದಲೆಳೆ ಅಂತರದಲ್ಲಿ ದೊಡ್ಡ ಅಪಘಾತ ತಪ್ಪಿದೆ. ಆದರೆ, ಹೆಲಿಕಾಪ್ಟರ್‌ನ ಹಿಂಭಾಗಕ್ಕೆ (ಬಾಲ) ಮತ್ತು ಒಂದು ಕಾರಿಗೆ ಸ್ವಲ್ಪ ಹಾನಿಯಾಗಿದೆ. ಈ ಹೆಲಿಕಾಪ್ಟರ್ ಕೆಸ್ಟ್ರೆಲ್ ವಿಮಾನಯಾನ ಸಂಸ್ಥೆಗೆ ಸೇರಿದೆ.
ಹೆಲಿಕಾಪ್ಟರ್‌ನಲ್ಲಿ ಪೈಲಟ್ ಸೇರಿದಂತೆ ಆರು ಜನ ಯಾತ್ರಿಕರಿದ್ದರು. ಘಟನೆಯಲ್ಲಿ ಪೈಲಟ್‌ಗೆ ಸ್ಪಲ್ಪ ಪ್ರಮಾಣದ ಗಾಯವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆದ್ದಾರಿಯಿಂದ ಹೆಲಿಕಾಪ್ಟರ್ ಸ್ಥಳಾಂತರಿಸಲಾಗುತ್ತಿದ್ದು, ಘಟನೆಯಿಂದ ಕೇದಾರನಾಥ ಹೆಲಿಕಾಪ್ಟರ್ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.