ನವದೆಹಲಿ: 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಲುವಾಗಿ ತಮ್ಮ ನಡುವಿನ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ವಿರೋಧ ಪಕ್ಷಗಳನ್ನು ಮಂಗಳವಾರ ಒತ್ತಾಯಿಸಿದ್ದಾರೆ.
ಅಲ್ಲದೇ, ದೆಹಲಿ ಅಬಕಾರಿ ನೀತಿ–2021ರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರದ ತನಿಖಾ ಸಂಸ್ಥೆಗಳಿಂದ ದಾಳಿಗೆ ಒಳಗಾಗಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಜೊತೆಗೆ ನಿಲ್ಲದಿರುವ ಕಾಂಗ್ರೆಸ್‌ನ ನಡೆಯನ್ನು ಸಹ ಅವರು ಟೀಕಿಸಿದ್ದಾರೆ.
ಪಕ್ಷದ ಅಲ್ಪಸಂಖ್ಯಾತರ ಘಟಕದ ಸಭೆಯಲ್ಲಿ ಮಾತನಾಡಿದ ಅವರು, ‘ಅರವಿಂದ ಕೇಜ್ರಿವಾಲ್ ಅವರೊಂದಿಗೆ ಕಾಂಗ್ರೆಸ್‌ಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಆ ಪಕ್ಷದೊಂದಿಗೆ ನಿಲ್ಲಬೇಕಾದುದು ನಿಮ್ಮ ಕರ್ತವ್ಯ. ನಮ್ಮ ನಿಜವಾದ ಹೋರಾಟ ಬಿಜೆಪಿ ಹಾಗೂ ಕೋಮು ಶಕ್ತಿಗಳ ವಿರುದ್ಧ’ ಎಂದರು.
‘ಪ್ರತ್ಯಕ್ಷವಾಗಲಿ, ಪರೋಕ್ಷವಾಗಲಿ ಕೋಮುಶಕ್ತಿಗಳಿಗೆ ಲಾಭವಾಗುವಂತಹ ಯಾವುದೇ ನಡೆ ನಮ್ಮದಾಗಬಾರದು. ಪ್ರತಿಯೊಬ್ಬರೂ ಈ ಅಂಶವನ್ನು ನೆನಪಿನಲ್ಲಿಡಬೇಕು’ ಎಂದು ಪವಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.