ADVERTISEMENT

ಕೇಜ್ರಿವಾಲ್ ಅವರನ್ನು ‘ಅರ್ಬನ್ ನಕ್ಸಲ್’ಎಂದ ತೇಜಸ್ವಿ ಸೂರ್ಯ

ಪಿಟಿಐ
Published 30 ಮಾರ್ಚ್ 2022, 16:34 IST
Last Updated 30 ಮಾರ್ಚ್ 2022, 16:34 IST
ಅರವಿಂದ ಕೇಜ್ರಿವಾಲ್ ಮತ್ತು ತೇಜಸ್ವಿ ಸೂರ್ಯ: ಪಿಟಿಐ/ಪ್ರಜಾವಾಣಿ ಚಿತ್ರ
ಅರವಿಂದ ಕೇಜ್ರಿವಾಲ್ ಮತ್ತು ತೇಜಸ್ವಿ ಸೂರ್ಯ: ಪಿಟಿಐ/ಪ್ರಜಾವಾಣಿ ಚಿತ್ರ   

ನವದೆಹಲಿ: ‘ದಿ ಕಾಶ್ಮೀರ ಫೈಲ್ಸ್’ಚಿತ್ರದ ಕುರಿತು ಟೀಕೆ ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಯುವ ಘಟಕದ ಅಧ್ಯಕ್ಷ ಸಂಸದ ತೇಜಸ್ವಿ ಸೂರ್ಯ, ಕೇಜ್ರಿವಾಲ್ ಅವರನ್ನು ‘ಅರ್ಬನ್ ನಕ್ಸಲ್’ ಎಂದು ಕರೆದಿದ್ದಾರೆ. ‘ಕಾಶ್ಮೀರದಲ್ಲಿನ ಹಿಂದೂ ನರಮೇಧವನ್ನು ಮರೆಮಾಚಲು’ ಅವರು ಪ್ರಯತ್ನಿಸುತ್ತಿದ್ದಾರೆ ಸೂರ್ಯ ಕಿಡಿಕಾರಿದ್ದಾರೆ.

ಈ ಸಿನಿಮಾ ಸತ್ಯದ ಮೇಲೆ ಆಧರಿತವಾದುದಲ್ಲ ಎಂಬ ಕೇಜ್ರಿವಾಲ್ ಹೇಳಿಕೆ ಖಂಡಿಸಿ ದೆಹಲಿಯ ಅವರ ನಿವಾಸದ ಎದುರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಬಳಿಕ, ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ತೇಜಸ್ವಿ ಸೂರ್ಯ, ಕೇಜ್ರಿವಾಲ್ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಎಎಪಿ ನಾಯಕರು ಕಾಶ್ಮೀರ ಫೈಲ್ಸ್ ಸಿನಿಮಾದ ಬಗ್ಗೆ ಹೇಳಿಕೆ ನೀಡುವ ಮೂಲಕ ಹಿಂದೂಗಳನ್ನು ಅವಮಾನಿಸಿದ್ದಾರೆ ಎಂದು ಹೇಳಿದರು.

ADVERTISEMENT

‘ಹಿಂದೂಗಳ ಹತ್ಯಾಕಾಂಡವನ್ನು ಮರೆಮಾಚುವ ಈ ಪ್ರಯತ್ನವು ನಾಗರಿಕ ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ. ಇದು ನಗರ ನಕ್ಸಲರ ತಂತ್ರವಾಗಿದೆ. ನಮ್ಮ ಪ್ರತಿಭಟನೆ ಯಾವುದೇ ಪಕ್ಷದ ವಿರುದ್ಧವಲ್ಲ ಮತ್ತು ಇದು ಕೇವಲ 'ಕಾಶ್ಮೀರ ಫೈಲ್ಸ್' ಬಗ್ಗೆಯೂ ಅಲ್ಲ. ಕಾಶ್ಮೀರದಲ್ಲಿ ಹಿಂದೂಗಳ ಹತ್ಯಾಕಾಂಡ ನಡೆದಿರುವುದನ್ನು ತಳ್ಳಿಹಾಕಿರುವ ಕೇಜ್ರಿವಾಲ್ ರೀತಿಯ ಅಮಾನವೀಯ ಮನಸ್ಥಿತಿಗಳ ವಿರುದ್ಧವಾಗಿದೆ’ ಎಂದು ಸೂರ್ಯ ಹೇಳಿದರು.

ಕೇಜ್ರಿವಾಲ್ ಅವರನ್ನು ಹವ್ಯಾಸಿ ಅಪರಾಧಿ ಎಂದು ಕರೆದ ಬಿಜೆಪಿ ಸಂಸದ ಸೂರ್ಯ, ಕೇಜ್ರಿವಾಲ್ ಯಾವಾಗಲೂ ತಮ್ಮ ಕ್ಷುಲ್ಲಕ ರಾಜಕೀಯ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ರಾಷ್ಟ್ರದ ಹಿತಾಸಕ್ತಿಗಿಂತ ದೊಡ್ಡದಾಗಿ ಪರಿಗಣಿಸುತ್ತಾರೆ ಎಂದು ಟೀಕಿಸಿದರು.

‘ಭದ್ರತಾ ಪಡೆಗಳ ಬದ್ಧತೆ ಮತ್ತು ಸಮಗ್ರತೆಯನ್ನು ಎಎಪಿ ಪದೇ ಪದೇ ಪ್ರಶ್ನಿಸಿದೆ. ಎಎಪಿಯ ನೀತಿ ಯಾವಾಗಲೂ ಭಯೋತ್ಪಾದಕರ ಪರವಾಗಿದೆ ಎಂಬುದನ್ನು ಅವರು(ಕೇಜ್ರಿವಾಲ್) ಹಲವು ಬಾರಿ ಸಾಬೀತುಪಡಿಸಿದ್ದಾರೆ’ ಎಂದು ಕುಟುಕಿದರು.

ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಕಾರ್ಯಕರ್ತರು ಕೇಜ್ರಿವಾಲ್ ವಿರುದ್ಧ ದೇಶದಾದ್ಯಂತ ಪ್ರತಿಭಟನೆಯನ್ನು ಮುಂದುವರೆಸಲಿದ್ದಾರೆ ಎಂದು ಸೂರ್ಯ ಹೇಳಿದರು.

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.