ADVERTISEMENT

ಗುಜರಾತ್‌ನಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ: ಕೇಜ್ರಿವಾಲ್‌ ಭರವಸೆ

ಪಿಟಿಐ
Published 13 ಸೆಪ್ಟೆಂಬರ್ 2022, 14:12 IST
Last Updated 13 ಸೆಪ್ಟೆಂಬರ್ 2022, 14:12 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಅಹಮದಾಬಾದ್‌ನಲ್ಲಿ ಮಂಗಳವಾರ ಎಎಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು    –ಪಿಟಿಐ ಚಿತ್ರ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಅಹಮದಾಬಾದ್‌ನಲ್ಲಿ ಮಂಗಳವಾರ ಎಎಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು    –ಪಿಟಿಐ ಚಿತ್ರ   

ಅಹಮದಾಬಾದ್‌: ಆಮ್‌ ಆದ್ಮಿ ಪಕ್ಷ(ಎಎಪಿ) ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮಂಗಳವಾರ ಭರವಸೆ ನೀಡಿದರು.

ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸುತ್ತಿರುವ ಅವರು ಅಹಮದಾಬಾದ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ರಾಜ್ಯದಲ್ಲಿ ಎಎಪಿ ಸರ್ಕಾರ ರಚಿಸಿದರೆ ಮುಖ್ಯಮಂತ್ರಿ, ಸಚಿವರು, ಶಾಸಕರು, ವಿರೋಧ ಪಕ್ಷದ ಶಾಸಕರು ಮತ್ತು ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುವುದಿಲ್ಲ. ಭ್ರಷ್ಟಾಚಾರ ನಡೆಸಿ ಸಿಕ್ಕಿಬಿದ್ದವರನ್ನು ಜೈಲಿಗೆ ಕಳಿಸಲಾಗುವುದು ಎಂದು ಪಕ್ಷವು ಭರವಸೆ ನೀಡುತ್ತದೆ ಎಂದರು.

ಅಹಮದಾಬಾದ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಗುಜರಾತ್‌ನಲ್ಲಿ ನಾನು ಯಾರನ್ನೇ ಭೇಟಿಯಾದರೂ ಅವರು ನನಗೆ ಮೊದಲು ಹೇಳುವುದು ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು. ಸರ್ಕಾರದಿಂದ ಕೆಲಸ ಮಾಡಿಸಿಕೊಳ್ಳಬೇಕಾದರೆ ಲಂಚ ನೀಡಲೇಬೇಕಾದ ಪರಿಸ್ಥಿತಿ ಇದೆ. ಆಡಳಿತದ ಕೆಳಹಂತಗಳಲ್ಲಿ ಭ್ರಷ್ಟಾಚಾರವಿದೆ. ಮೇಲಿನ ಹಂತಗಳಲ್ಲಿ ಹಗರಣಗಳು ನಡೆದಿವೆ. ಇದರ ವಿರುದ್ಧ ಮಾತನಾಡಿದವರನ್ನು ಬೆದರಿಸಲಾಗುತ್ತದೆ’ ಎಂದು ಹೇಳಿದರು.

ADVERTISEMENT

ತೆರಿಗೆ ರೂಪದಲ್ಲಿ ಸಾರ್ವಜನಿಕರಿಂದ ಸಂಗ್ರಹವಾಗುವ ಪ್ರತಿಯೊಂದು ರೂಪಾಯಿಯೂ ಗುಜರಾತ್‌ ಜನರ ಸೇವೆಗಾಗಿ ವಿನಿಯೋಗವಾಗುತ್ತದೆ. ಗುಜರಾತ್‌ನಲ್ಲಿ ಶಾಸಕರು ಮತ್ತು ಸರ್ಕಾರಿ ಅಧಿಕಾರಿಗಳು ಸದ್ಯ ನಡೆಸುತ್ತಿರುವ ಅಕ್ರಮ ವ್ಯವಹಾರಗಳನ್ನು ತಡೆಯಲಾಗುವುದು. ಈಗಿನ ರಾಜ್ಯ ಸರ್ಕಾರ ನಡೆಸಿರುವ ಹಗರಣಗಳ ತನಿಖೆ ನಡೆಸಿ, ಅಕ್ರಮವಾಗಿ ಸಂಗ್ರಹವಾಗಿರುವ ಹಣವನ್ನು ಗುಣಮಟ್ಟದ ಶಿಕ್ಷಣ, ಉಚಿತ ವಿದ್ಯುತ್‌ನಂಥ ಸಾರ್ವಜನಿಕರ ಸೇವೆಗೆ ವಿನಿಯೋಗ ಮಾಡಲಾಗುವುದು ಎಂದರು.

ದೆಹಲಿ ಮಾದರಿಯಲ್ಲೇ ಸರ್ಕಾರದ ಹಲವಾರು ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ಕೆಲಸವನ್ನೂ ಮಾಡಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.