ನವದೆಹಲಿ: ‘ಮಧ್ಯಮ ವರ್ಗದ ಜನರು ‘ತೆರಿಗೆ ಭಯೋತ್ಪಾದನೆ’ಯ ಬಲಿಪಶುಗಳು’. ಇವರನ್ನು ಸರ್ಕಾರಗಳು ಕಡೆಗಣಿಸಿವೆ’ ಎಂದು ಹೇಳಿರುವ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್, ಈ ವರ್ಗದವರ ಕಲ್ಯಾಣಕ್ಕಾಗಿ ಏಳು ಹಕ್ಕೊತ್ತಾಯಗಳಿರುವ ‘ಪ್ರಣಾಳಿಕೆ’ ಬಿಡುಗಡೆ ಮಾಡಿದ್ದಾರೆ.
ಬುಧವಾರ ಈ ಕುರಿತು ವಿಡಿಯೊ ಸಂದೇಶ ನೀಡಿರುವ ಕೇಜ್ರಿವಾಲ್ ಅವರು, ‘ಮಧ್ಯಮ ವರ್ಗದವರು ದೇಶದ ಆರ್ಥಿಕತೆಯ ನಿಜವಾದ ಶಕ್ತಿ. ಆದರೆ, ವರ್ಷಗಳಿಂದ ಕೇವಲ ತೆರಿಗೆ ಉದ್ದೇಶಕ್ಕಾಗಿ ಶೋಷಣೆ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.
ಮಧ್ಯಮ ವರ್ಗದವರ ‘ಏಳಿಗೆ’ಗಾಗಿ ಏಳು ಅಂಶಗಳನ್ನು ಪ್ರಕಟಿಸಿದ ಅವರು, ರಾಜಕೀಯ ಪಕ್ಷಗಳ ಹಿಂದಿನ ವರ್ಷಗಳಲ್ಲಿನ ಆಡಳಿತ ವೈಖರಿ ವಿರೋಧಿಸಿ ವಾಗ್ದಾಳಿ ನಡೆಸಿದರು.
ಸ್ವಾತಂತ್ರ್ಯಾನಂತರ ಈ ಮಧ್ಯಮ ವರ್ಗದವರಲ್ಲಿ ಗುಲಾಮಗಿರಿಯ ಮನಃಸ್ಥಿತಿ ಮೂಡುವಂತೆ ಈ ಸರ್ಕಾರಗಳು ಮಾಡಿವೆ. ಸಂಸತ್ ಅಧಿವೇಶನದಲ್ಲಿ ಈ ವರ್ಗದವರ ಪರ ಎಎಪಿ ಸಂಸದರು ಧ್ವನಿ ಎತ್ತಬೇಕು. ಈ ಅಂಶ ರಾಜಕೀಯ ಪಕ್ಷಗಳ ಆದ್ಯತೆಯ ಕೇಂದ್ರವಾಗಬೇಕು ಎಂದು ಪ್ರತಿಪಾದಿಸಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಈ ಘೋಷಣೆ ಹೊರಬಿದ್ದಿದೆ. ದೆಹಲಿ ವಿಧಾನಸಭೆಗೆ ಫೆ. 5ರಂದು ಚುನಾವಣೆ ನಡೆಯಲಿದ್ದು, 8ರಂದು ಮತಎಣಿಕೆ ನಡೆಯಲಿದೆ.
ಪಂಜಾಬಿಗಳು ದೇಶಕ್ಕಿರುವ ಬೆದರಿಕೆ ಎಂದು ವರ್ಮಾ ಹೇಳಿದ್ದಾರೆ. ಇದು ರಾಜಧಾನಿಯಲ್ಲಿ ವಾಸಿಸುತ್ತಿರುವ ಲಕ್ಷಾಂತರ ಸಿಖ್ಖರಿಗೆ ಮಾಡಿದ ಅವಮಾನ. ಇದಕ್ಕಾಗಿ ಅವರ ಕ್ಷಮೆ ಕೋರಬೇಕುಅರವಿಂದ ಕೇಜ್ರಿವಾಲ್ ಎಎಪಿ ಸಂಚಾಲಕ
ಏಳು ಅಂಶಗಳು...
* ಶಿಕ್ಷಣ ಕ್ಷೇತ್ರದ ಅನುದಾನವನ್ನು ಈಗಿನ ಶೇ 2ರಿಂದ ಶೇ 10ಕ್ಕೆ ಏರಿಸಬೇಕು
* ಗುಣಮಟ್ಟದ ಉನ್ನತ ಶಿಕ್ಷಣ ಸಿಗುವಂತೆ ಸಬ್ಸಿಡಿ ಸೌಲಭ್ಯ ಮತ್ತು ವಿದ್ಯಾರ್ಥಿವೇತನ ನೀಡಬೇಕು
* ಜಿಡಿಪಿಯ ಶೇ 10ರಷ್ಟು ಆರೋಗ್ಯ ಕ್ಷೇತ್ರಕ್ಕೆ ವ್ಯಯಿಸಬೇಕು. ಆರೋಗ್ಯ ವಿಮೆ ಪ್ರೀಮಿಯಂ ಮೇಲೆ ತೆರಿಗೆ ಕೈಬಿಡಬೇಕು
* ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿನ ₹ 7 ಲಕ್ಷದಿಂದ ₹ 10 ಲಕ್ಷಕ್ಕೆ ಏರಿಸಬೇಕು
* ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಕೈಬಿಡಬೇಕು
* ನಿವೃತ್ತಿ ಬಳಿಕ ಖಾಸಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಿಗುವಂತೆ ಉಚಿತ ಆರೋಗ್ಯ ವಿಮೆ ಕಲ್ಪಿಸಬೇಕು
* ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ಶೇ 50ರ ಪ್ರಯಾಣದರ ರಿಯಾಯಿತಿ ಮರುಜಾರಿಗೊಳಿಸಬೇಕು
₹ 100 ಕೋಟಿ ಮಾನನಷ್ಟ ಮೊಕದ್ದಮೆ
ನವದೆಹಲಿ: ಅರವಿಂದ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಬಿಜೆಪಿ ಸಂಸದ ಪರ್ವೇಶ್ ವರ್ಮಾ ₹ 100 ಕೋಟಿಗೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ‘ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ’ ಎಂದಿದ್ದಾರೆ. ನಾನು ಪ್ರಕರಣ ಗೆದ್ದರೆ ನವದೆಹಲಿ ಕ್ಷೇತ್ರದ ಅಭಿವೃದ್ಧಿಗೆ ಆ ಹಣ ಬಳಸುತ್ತೇನೆ ಎಂದು ವರ್ಮಾ ಹೇಳಿದ್ದಾರೆ. ಪಂಜಾಬ್ ನೋಂದಣಿಯಿರುವ ಸಾವಿರಾರು ವಾಹನಗಳು ದೆಹಲಿಗೆ ಬರುತ್ತಿವೆ. ಸಚಿವರು ಶಾಸಕರು ಮುಖಂಡರು ಬರುತ್ತಿದ್ದು ಎಎಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಆಕ್ಷೇಪವಿಲ್ಲ. ಆದರೆ ಚೀನಾ ಉತ್ಪಾದಿತ ಸಿಸಿಟಿವಿ ಕ್ಯಾಮೆರಾ ಮಧ್ಯ ಹಣ ನೀಡಿ ಪ್ರಚಾರ ನಡೆಸುತ್ತಿದ್ದಾರೆ ಎಂದು ವರ್ಮಾ ಆರೋಪಿಸಿದರು. ‘ಪಂಜಾಬಿಗಳು ದೇಶಕ್ಕಿರುವ ಬೆದರಿಕೆ’ ಎಂದು ಹೇಳಿದ್ದೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಆದರೆ ಸಿಖ್ ಸಮುದಾಯಕ್ಕೆ ನನ್ನ ಕೊಡುಗೆ ಏನೆಂದು ಹೇಳಿಕೊಳ್ಳುವ ಅಗತ್ಯವಿಲ್ಲ’ ಎಂದರು. ಬಿಜೆಪಿಯ ಸಣ್ಣ ಮಗುವೊಂದು ಪಂಜಾಬಿಗರಿಗೆ ಸವಾಲು ಒಡ್ಡುತ್ತಿದೆ ಎಂದು ವರ್ಮಾ ಹೇಳಿಕೆಗೆ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ. ಪಂಜಾಬಿಗರ ಅಪಮಾನಿಸಿದ ಹೇಳಿಕೆಗಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಎಎಪಿ ಕಾಂಗ್ರೆಸ್‌ನಿಂದ ವಂಚನೆ –ಮೋದಿ
ನವದೆಹಲಿ: ‘ಎಎಪಿ ಒಂದು ವಿಪತ್ತು. ದೆಹಲಿಯ ನಾಗರಿಕರು ಈಗಾಗಲೇ ಎಎಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ದೆಹಲಿಯ ಬಿಜೆಪಿ ಸದಸ್ಯರ ಜೊತೆಗೆ ನಡೆದ ಆನ್‌ಲೈನ್ ಸಂವಾದಲ್ಲಿ ಅವರು ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ಶೇ 50ಕ್ಕೂ ಅಧಿಕ ಸ್ಥಾನ ಗೆಲ್ಲುವ ಗುರಿ ಹೊಂದಬೇಕು ಎಂದು ಸಲಹೆ ಮಾಡಿದರು. ‘ಎಎಪಿಗೆ ಸೋಲುವ ಭೀತಿ ಉಂಟಾಗಿದೆ. ಹೀಗಾಗಿ ನಿತ್ಯ ಹೊಸ ಘೋಷಣೆ ಮಾಡುತ್ತಿದೆ. ಎಎಪಿ ಕೇವಲ ಸುಳ್ಳು ಹೇಳುತ್ತಿದೆ. ಕಾಂಗ್ರೆಸ್ ಕೂಡ 25 ವರ್ಷಗಳಿಂದ ಜನರನ್ನು ವಂಚಿಸಿದೆ’ ಎಂದು ಆರೋಪಿಸಿದರು. ‘ದೆಹಲಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕೇಂದ್ರ ಸರ್ಕಾರದ ನೌಕರರು ಪಿಂಚಣಿದಾರರು ಇದ್ದಾರೆ. ಈ ಎಲ್ಲರ ಬದುಕನ್ನು 8ನೇ ವೇತನ ಆಯೋಗ ಬದಲಿಸಲಿದೆ’ ಎಂದು ಮೋದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.