ADVERTISEMENT

ಮುಂಬೈ | ವಿಮಾನ ನಿಲ್ದಾಣದಲ್ಲಿ ₹15 ಕೋಟಿಯ ಕೊಕೇನ್‌ ವಶ: ಕೀನ್ಯಾ ಮಹಿಳೆ ಬಂಧನ

ಪಿಟಿಐ
Published 29 ಡಿಸೆಂಬರ್ 2023, 13:22 IST
Last Updated 29 ಡಿಸೆಂಬರ್ 2023, 13:22 IST
   

ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ₹15 ಕೋಟಿಯ ಕೊಕೇನ್‌ ವಶಪಡಿಸಿಕೊಳ್ಳಲಾಗಿದ್ದು, ಕೀನ್ಯಾ ಮೂಲದ ಮಹಿಳೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯ ಲಗೇಜ್‌ ಬ್ಯಾಗ್‌ನಲ್ಲಿದ್ದ ಹೇರ್‌ ಕಂಡೀಷನರ್‌ ಮತ್ತು ಬಾಡಿ ವಾಶ್‌ ಬಾಟಲಿಗಳಲ್ಲಿ ಮಾದಕ ವಸ್ತುವನ್ನು ಬಚ್ಚಿಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ವಿಮಾನ ನಿಲ್ದಾಣದಲ್ಲಿ ನೈರೋಬಿಯಿಂದ ಆಗಮಿಸಿದ ಮಹಿಳೆಯನ್ನು ತಡೆದು ಡಿಆರ್‌ಐ ಅಧಿಕಾರಿಗಳು ತಪಾಸಣೆ ನಡೆಸಿದರು. ಪರಿಶೀಲನೆ ವೇಳೆ ಮಹಿಳೆಯ ಲಗೇಜ್‌ ಬ್ಯಾಗ್‌ನಲ್ಲಿದ್ದ ಹೇರ್‌ ಕಂಡೀಷನರ್‌ ಹಾಗೂ ಬಾಡಿ ವಾಶ್‌ ಬಾಟಲಿಗಳಲ್ಲಿ ಬಿಳಿ ಪುಡಿ ಇದ್ದ ಎರಡು ಪೊಟ್ಟಣಗಳನ್ನು ಪತ್ತೆಹಚ್ಚಲಾಯಿತು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪರಿಶೀಲನೆ ನಂತರ ವಶಪಡಿಸಿಕೊಂಡ ವಸ್ತುವು ಕೊಕೇನ್‌ ಎಂದು ದೃಢಪಟ್ಟಿದೆ. ಒಟ್ಟು ₹14.9 ಕೋಟಿ ಮೌಲ್ಯದ ಸರಿ ಸುಮಾರು 1.5 ಕೆ.ಜಿ ಕೊಕೇನ್‌ ವಶಪಡಿಸಿಕೊಳ್ಳಲಾಗಿದೆ. ಮಹಿಳೆಯನ್ನು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್) ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಹಾಗೂ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.