ADVERTISEMENT

ಕೇರಳ ಸಿಎಂ ವಿರುದ್ಧ ಬಲವಂತದ ಹೇಳಿಕೆ ಸಂಗ್ರಹ: ಇ.ಡಿ ಅಧಿಕಾರಿಗಳ ವಿರುದ್ಧ ಪ್ರಕರಣ

ಕೇರಳ ಸಿಎಂ ಮೇಲೆ ಸ್ವಪ್ನಾರಿಂದ ಬಲವಂತದ ಹೇಳಿಕೆ ಪಡೆದ ಆರೋಪ

ಪಿಟಿಐ
Published 19 ಮಾರ್ಚ್ 2021, 11:40 IST
Last Updated 19 ಮಾರ್ಚ್ 2021, 11:40 IST
ಕೇರಳ ಸಿಎಂ ಪಿಣರಾಯಿ ವಿಜಯನ್‌
ಕೇರಳ ಸಿಎಂ ಪಿಣರಾಯಿ ವಿಜಯನ್‌   

ತಿರುವನಂತಪುರ: ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ ಅವರಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ವಿರುದ್ಧ ಬಲವಂತವಾಗಿ ಹೇಳಿಕೆ ಕೊಡಿಸಿದ ಆಪಾದನೆ ಸಂಬಂಧ ಜಾರಿ ನಿರ್ದೇಶಾನಾಲಯದ (ಇಡಿ) ಅಧಿಕಾರಿಗಳ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ವಪ್ನಾ ಅವರ ಧ್ವನಿಯ ಆಡಿಯೊ ಸೋರಿಕೆ ಬಗ್ಗೆ ತನಿಖೆ ನಡೆಸುತ್ತಿರುವ ಅಪರಾಧ ವಿಭಾಗದ ಪೊಲೀಸ್‌ ತಂಡ ಸಲ್ಲಿಸಿದ ವರದಿ ಆಧಾರದ ಮೇಲೆ ಎರಡು ದಿನಗಳ ಹಿಂದೆಯೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಾಧ ವಿಭಾಗದ ಪೊಲೀಸರು ಇ.ಡಿ ಅಧಿಕಾರಿಗಳ ವಿರುದ್ಧ ಸೆಕ್ಷನ್‌ 120–ಬಿ (ಕ್ರಿಮಿನಲ್‌ ಪಿತೂರಿ), 167 (ಸಾರ್ವಜನಿಕ ಸೇವೆಯಲ್ಲಿರುವವರಿಗೆ ಘಾಸಿ ಉಂಟುಮಾಡಲು ಸುಳ್ಳು ದಾಖಲೆ ಸೃಷ್ಟಿಸುವುದು), 192 (ನಕಲಿ ಸಾಕ್ಷ್ಯ ಸೃಷ್ಟಿ), 195–ಎ (ಸುಳ್ಳು ಸಾಕ್ಷ್ಯನೀಡುವಂತೆ ಬೆದರಿಕೆ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಎಫ್‌ಐಆರ್ ಪ್ರಕಾರ, ‘ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಇ.ಡಿ ಅಧಿಕಾರಿಗಳು ಸ್ವಪ್ನಾ ಪ್ರಭಾ ಸುರೇಶ್ ಎಂಬ ಆರೋಪಿಯನ್ನು 2020ರ ಆಗಸ್ಟ್ 12 ಮತ್ತು 13 ರಂದು ವಿಚಾರಣೆ ನಡೆಸುವಾಗ ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸುವ ಸಲುವಾಗಿ ರಾಜ್ಯದ ಮುಖ್ಯಮಂತ್ರಿಯ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ’.

ಪ್ರಕರಣ ದಾಖಲಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರಕರಣ ದಾಖಲಾಗಿದ್ದರೆ ಅದನ್ನು ಕಾನೂನಾತ್ಮಕವಾಗಿಯೇ ಎದುರಿಸಲಾಗುವುದು ಎಂದು ಇ.ಡಿ ಮೂಲಗಳು ಹೇಳಿವೆ.

ಯುಎಇಯ ಕಾನ್ಸುಲೇಟ್‌ನ ಮಾಜಿ ಉದ್ಯೋಗಿಯಾದ ಸ್ವಪ್ನಾ ಸುರೇಶ್‌ ಸುಮಾರು ₹14.82 ಕೋಟಿ ಮೌಲ್ಯದ 30 ಕೆ.ಜಿ. ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ರಾಷ್ಟ್ರೀಯ ತನಿಖಾ ದಳ ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

‘ಕಳೆದ ವರ್ಷದ ಆಗಸ್ಟ್‌ನಲ್ಲಿ ಕೊಚ್ಚಿಯ ಇ.ಡಿ ಕಚೇರಿಯಲ್ಲಿ ವಿಚಾರಣೆ ನಡೆಸುವಾಗ ಕೆಲವು ಇ.ಡಿ ಅಧಿಕಾರಿಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಕೆಲವು ಸಚಿವರ ಮೇಲೆ ಸುಳ್ಳು ಹೇಳಿಕೆ ನೀಡುವಂತೆ ನನಗೆ ಕಿರುಕುಳ ನೀಡಿದರು’ ಎಂದು ಸ್ವಪ್ನಾ ಹೇಳಿರುವ ಆಡಿಯೊ ತುಣುಕು ಕೆಲವು ತಿಂಗಳ ಹಿಂದೆ ಹರಿದಾಡಿತ್ತು. ಇದರ ಜಾಡು ಹಿಡಿದು ತನಿಖೆ ನಡೆಸುತ್ತಿರುವ ಕೇರಳ ಪೊಲೀಸರು ಇ.ಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.