ADVERTISEMENT

ಪಾಕಿಸ್ತಾನ ಕ್ರಿಕೆಟಿಗ ಆಫ್ರಿದಿಯನ್ನು ಆಹ್ವಾನಿಸಿರಲಿಲ್ಲ: ಕೇರಳ ಸಮುದಾಯ ಸ್ಪಷ್ಟನೆ

ಪಿಟಿಐ
Published 31 ಮೇ 2025, 16:06 IST
Last Updated 31 ಮೇ 2025, 16:06 IST
ಶಾಹಿದ್ ಆಫ್ರಿದಿ
ಶಾಹಿದ್ ಆಫ್ರಿದಿ   

ತಿರುವನಂತಪುರಂ: ದುಬೈನಲ್ಲಿ ನಡೆದ ಸಮಾರಂಭದಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಆಫ್ರಿದಿ ಅವರಿಗೆ ಭವ್ಯ ಸ್ವಾಗತ ಕೋರಿದ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದ ದುಬೈನ ಕೇರಳದ ವಲಸಿಗ ಸಮುದಾಯವು ಕ್ಷಮೆ ಕೋರಿದೆ. ಅಲ್ಲದೇ ಅದು ಉದ್ದೇಶಪೂರ್ವಕವಲ್ಲ ಎಂದು ಸ್ಪಷ್ಟಪಡಿಸಿದೆ.

ಅರಬ್ ಸಂಯುಕ್ತ ರಾಷ್ಟ್ರದಲ್ಲಿರುವ ಕೇರಳದ ಕೊಚ್ಚಿನ್ ವಿಶ್ವವಿದ್ಯಾಲಯದ ಬಿ–ಟೆಕ್‌ ಹಳೆ ವಿದ್ಯಾರ್ಥಿಗಳ ಸಂಘ(ಕ್ಯುಬಾ) ದುಬೈನಲ್ಲಿ ಇತ್ತೀಚೆಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇಲ್ಲಿ ಆಫ್ರಿದಿ ಅವರಿಗೆ ಅದ್ದೂರಿಯಾಗಿ ಸ್ವಾಗತ ನೀಡಲಾಗಿತ್ತು ಎನ್ನುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆಫ್ರಿ ದಿ ಅವರನ್ನು ಸುತ್ತುವರಿದಿದ್ದ ಅಭಿಮಾನಿಗಳ ಸಮೂಹ ‘ಬೂಮ್... ಬೂಮ್‌’ (ಆಫ್ರಿದಿ ಅಡ್ಡ ಹೆಸರು) ಎಂದು ಕೂಗಿತ್ತು. ಇದು ಸಾಮಾಜಿಕ ಜಾಲತಾಣದ ಹಲವರು ಮತ್ತು ಬಲಪಂಥೀಯ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿತ್ತು. 

‘ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ನಮ್ಮ ಸೇನೆಯ ಬಗ್ಗೆ ಆಫ್ರಿದಿ ಆಡಿದ್ದ ವಿವಾದಿತ ಹೇಳಿಕೆ ಪ್ರಸ್ತಾಪಿಸಿ ‘ಕ್ಯುಬಾ’ ಸಂಘಟಕರ ವಿರುದ್ಧ ಟೀಕೆ ಮಾಡಲಾಗಿತ್ತು.

ADVERTISEMENT

ಶುಕ್ರವಾರ ಇನ್‌ಸ್ಟಾಗ್ರಾಂ ಪೋಸ್ಟ್‌ ಮೂಲಕ ಕ್ಯುಬಾ ಪ್ರಮುಖರು ಕ್ಷಮೆ ಕೋರಿದ್ದಾರೆ. ‘ಕಾರ್ಯಕ್ರಮಕ್ಕೆ ಆಫ್ರಿದಿ ಅವರನ್ನು ನಾವು ಆಹ್ವಾನಿಸಿಲ್ಲ. ಜಾಗದ ಸಮಸ್ಯೆಯಿಂದಾಗಿ ಪಾಕಿಸ್ತಾನ ದುಬೈ ಸಂಘಟನೆ ಕಾರ್ಯಕ್ರಮ ನಡೆಸುತ್ತಿದ್ದ ಸಭಾಂಗಣದಲ್ಲೇ ನಾವೂ ಕಾರ್ಯಕ್ರಮ ಆಯೋಜಿಸಿದ್ದೆವು. ಮೇ 25ರಂದು ಇನ್ನೊಂದು ಸಮಾರಂಭಕ್ಕೆ ಆಗಮಿಸಿದ್ದ ಆಫ್ರಿದಿ ಅವರು ನಮ್ಮ ಆಹ್ವಾನ ಇಲ್ಲದೇ ಇದ್ದಕ್ಕಿದ್ದಂತೆ ಸಮಾರಂಭ ಸ್ಥಳಕ್ಕೆ ಬಂದರು’ ಎಂದು ಕೇರಳ ಸಮುದಾಯ ಹೇಳಿದೆ.

‘ಆದರೂ ಕೆಲವರಿಗೆ ಇದರಿಂದ ನೋವಾಗಿದ್ದರೆ ಕ್ಷಮೆ ಇರಲಿ. ನಮ್ಮ ದೇಶದ ಸಂಸ್ಕೃತಿ ಮತ್ತು ಸಮಗ್ರತೆಯ ಸ್ಫೂರ್ತಿಯನ್ನು ಕಾಪಾಡಲು ನಾವು ಬದ್ಧ’ ಎಂದು ‘ಕ್ಯುಬಾ’ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.