ತಿರುವನಂತಪುರ: ಅಶಿಸ್ತಿನ ವರ್ತನೆ ಹಾಗೂ ಮಾರ್ಷಲ್‌ಗಳ ಮೇಲೆ ಹಲ್ಲೆ ಮಾಡಿದ ಆರೋಪಗಳ ಮೇಲೆ ಕಾಂಗ್ರೆಸ್ ಪಕ್ಷದ ಮೂವರು ಶಾಸಕರನ್ನು ಕೇರಳ ವಿಧಾನಸಭೆಯ ಪ್ರಸಕ್ತ ಅಧಿವೇಶನದಿಂದ ಗುರುವಾರ ಅಮಾನತುಗೊಳಿಸಲಾಗಿದೆ.
ಶಾಸಕರಾದ ರೋಜಿ ಎಂ.ಜಾನ್, ಎಂ.ವಿನ್ಸೆಂಟ್ ಹಾಗೂ ಸನೀಶ್ ಕುಮಾರ್ ಜೋಸೆಫ್ ಅಮಾನತುಗೊಂಡಿರುವ ಶಾಸಕರು.
ಈ ಘಟನೆ ವೇಳೆ, ಮುಖ್ಯ ಮಾರ್ಷಲ್ ಅವರಿಗೆ ಗಾಯಗಳಾಗಿವೆ. ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ.ರಾಜೇಶ್ ಅವರು ಮಂಡಿಸಿದ ಗೊತ್ತುವಳಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಶಬರಿಮಲೆ ದೇವಸ್ಥಾನದಲ್ಲಿನ ಚಿನ್ನ ಕಳುವು ವಿಚಾರವಾಗಿ ವಿಧಾನಸಭೆಯಲ್ಲಿ ನಡೆಯುತ್ತಿರುವ ಜಟಾಪಟಿಯಿಂದಾಗಿ ಸತತ ನಾಲ್ಕನೇ ದಿನವೂ ಕಲಾಪಕ್ಕೆ ಅಡ್ಡಿಯುಂಟಾಯಿತು.
ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ವಿಷಯ ಪ್ರಸ್ತಾಪಿಸಿ, ‘ದೇವಸ್ವಂ ಸಚಿವ ವಿ.ಎನ್.ವಾಸವನ್ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ, ಕಲಾಪ ನಡೆಸಲು ಕಾಂಗ್ರೆಸ್ ನೇತೃತ್ವದ ವಿಪಕ್ಷ ಪಾಳಯ ಯುಡಿಎಫ್ ಅವಕಾಶ ನೀಡುವುದಿಲ್ಲ’ ಎಂದರು.
ಇದರ ಬೆನ್ನಲ್ಲೇ, ವಿರೋಧ ಪಕ್ಷಗಳ ಶಾಸಕರು ವಿಧಾನಸಭಾಧ್ಯಕ್ಷರ ಪೀಠದ ಮುಂದೆ ಜಮಾಯಿಸಿ, ಘೋಷಣೆಗಳನ್ನು ಕೂಗಲು ಆರಂಭಿಸಿದರು. ಘೋಷಣಾ ವಾಕ್ಯಗಳಿರುವ ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟಿಸಿದರು.
ಆಗ, ವಿಪಕ್ಷಗಳ ಶಾಸಕರ ಹಿಡಿದಿರುವ ಬ್ಯಾನರ್‌ಗಳನ್ನು ವಶಪಡಿಸಿಕೊಳ್ಳುವಂತೆ ವಿಧಾನಸಭಾಧ್ಯಕ್ಷ ಎ.ಎನ್.ಶಂಸೀರ್ ಅವರು ಮಾರ್ಷಲ್‌ಗಳಿಗೆ ಸೂಚಿಸಿದರು. ಇದು, ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು. ಬಳಿಕ ಕೆಲ ಕಾಲ ಕಲಾಪವೂ ಸ್ಥಗಿತಗೊಂಡಿತು.
ಮತ್ತೆ ಕಲಾಪ ಆರಂಭಗೊಂಡಾಗ ಮಾತನಾಡಿದ ವಿಧಾನಸಭಾಧ್ಯಕ್ಷ ಶಂಸೀರ್,‘ಗಲಾಟೆ ವೇಳೆ, ವಿರೋಧ ಪಕ್ಷಗಳ ಶಾಸಕರು ನಡೆಸಿದ ಹಲ್ಲೆಯಿಂದಾಗಿ ಮುಖ್ಯ ಮಾರ್ಷಲ್ ಅವರಿಗೆ ಗಾಯಗಳಾಗಿವೆ’ ಎಂದು ಸದನಕ್ಕೆ ತಿಳಿಸಿದರು.
ನಂತರ, ಮೂವರು ಕಾಂಗ್ರೆಸ್ ಶಾಸಕರನ್ನು ಪ್ರಸಕ್ತ ಅಧಿವೇಶನದಿಂದ ಅಮಾನತುಗೊಳಿಸಬೇಕು ಎಂಬ ಗೊತ್ತುವಳಿಯನ್ನು ಸಚಿವ ರಾಜೇಶ್ ಮಂಡಿಸಿದರು. ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ನಿರಾಧಾರ: ಇನ್ನೊಂದೆಡೆ, ವಿರೋಧ ಪಕ್ಷಗಳ ಶಾಸಕರು, ಕಲಾಪವನ್ನು ಬಹಿಷ್ಕರಿಸಿದ್ದಕ್ಕೂ ಸದನ ಸಾಕ್ಷಿಯಾಯಿತು.
ತಮ್ಮನ್ನು ಅಮಾನತುಗೊಳಿಸಿರುವ ಕ್ರಮಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕರು,‘ಮಾರ್ಷಲ್‌ಗಳ ಮೇಲೆ ಹಲ್ಲೆ ಮಾಡಿದ್ದೇವೆ ಎಂಬ ಆರೋಪ ನಿರಾಧಾರ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.