
ತಿರುವನಂತಪುರ: ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ ಮತ್ತು ಮುಖ್ಯ ಅರ್ಚಕ ಕಂಡರಾರು ರಾಜೀವರು ಅವರ ಬಂಧನ ಸಂಬಂಧ ಕೇರಳ ವಿಧಾನಸಭೆಯಲ್ಲಿ ಸೋಮವಾರ ಆಡಳಿತಾರೂಢ ಎಲ್‌ಡಿಎಫ್ ಮತ್ತು ವಿರೋಧ ಪಕ್ಷ ಯುಡಿಎಫ್ ನಡುವೆ ತೀವ್ರ ವಾಗ್ವಾದ ನಡೆಯಿತು.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ನಾಯಕರು, ‘ಚಿನ್ನ ನಾಪತ್ತೆ ಪ್ರಕರಣ, ಮಹಿಳೆಯರ ಪ್ರವೇಶ ಸೇರಿದಂತೆ ಶಬರಿಮಲೆಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸರ್ಕಾರದ ನಿಲುವು ಸರಿಯಲ್ಲ. ಸದನದ ಕಲಾಪಗಳಿಗೆ ಸಹಕರಿಸುವುದಿಲ್ಲ’ ಎಂದು ಸಭಾಧ್ಯಕ್ಷ ಎ.ಎನ್. ಶಂಸೀರ್ ಅವರಿಗೆ ಹೇಳಿದರು.
‘ನವಯುಗ ಯಾತ್ರೆ’ಯ ಭಾಗವಾಗಿ ಹೊರಗಿರುವ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರ ಅನುಪಸ್ಥಿತಿಯಲ್ಲಿ, ಕಾಂಗ್ರೆಸ್ ಶಾಸಕ ಕೆ. ಬಾಬು ಅವರು ಸದನಕ್ಕೆ ತಮ್ಮ ನಿಲುವನ್ನು ತಿಳಿಸಿದರು.
ಚಿನ್ನ ನಾಪತ್ತೆ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಕ್ಕಿರುವುದು ಹಾಗೂ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಪ್ರಧಾನ ಅರ್ಚಕರನ್ನು ಬಂಧಿಸಿದ್ದಕ್ಕೆ ಟೀಕಿಸಿದರು.
‘ದೇವಸ್ವಂ ಸಚಿವ ವಿ.ಎನ್. ವಾಸವನ್ ಅವರು ರಾಜೀನಾಮೆ ನೀಡಬೇಕು. ಸರ್ಕಾರದ ಲೋಪಗಳಿಂದಾಗಿ ಪ್ರಕರಣದ ಪ್ರಮುಖ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಅವರೆಲ್ಲರೂ ಈಗ ಜೈಲಿನ ಹೊರಗೆ ಮುಕ್ತ ಜೀವನ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಶಬರಿಮಲೆ ಆಚರಣೆಗಳ ಉಲ್ಲಂಘನೆಯನ್ನು ಸರ್ಕಾರ ಬೆಂಬಲಿಸುತ್ತಿದೆ. ಈ ನಿಲುವನ್ನು ಬೆಂಬಲಿಸದ ಕಾರಣ ಪ್ರಧಾನ ಅರ್ಚಕರನ್ನು 40 ದಿನಗಳವರೆಗೆ ಜೈಲಿನಲ್ಲಿರಿಸಲಾಯಿತು’ ಎಂದು ಆರೋಪಿಸಿದರು.
2018ರಲ್ಲಿ ಮಹಿಳೆಯರ ಪ್ರವೇಶ ವಿಷಯವನ್ನೂ ಬಾಬು ಉಲ್ಲೇಖಿಸಿದರು. ‘ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸರ್ಕಾರದ ಬೆಂಬಲದೊಂದಿಗೆ ಆಯೋಜಿಸಿದ್ದ ‘ಜಾಗತಿಕ ಅಯ್ಯಪ್ಪ ಸಂಗಮ’ ಕಾರ್ಯಕ್ರಮದಲ್ಲಿ ಅಕ್ರಮಗಳು ನಡೆದಿವೆ’ ಎಂದೂ ಆರೋಪಿಸಿದರು.
ಈ ವೇಳೆ, ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ತೀವ್ರ ವಾಗ್ವಾದ ನಡೆಯಿತು. ಯುಡಿಎಫ್ ಶಾಸಕರು ಫಲಕಗಳನ್ನು ಹಿಡಿದುಕೊಂಡು ಸಭಾಧ್ಯಕ್ಷರ ಪೀಠದ ಮುಂದೆ ಪ್ರತಿಭಟನೆ ನಡೆಸಿದರು. ಬಳಿಕ, ಕಲಾಪವನ್ನು ಬಹಿಷ್ಕರಿಸಿ ಸದನದಿಂದ ಹೊರನಡೆದರು. ಸಭಾಧ್ಯಕ್ಷ ಎ.ಎನ್. ಶಂಸೀರ್ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.