ADVERTISEMENT

ಕೇರಳ: ವೈದ್ಯರು ಶಿಫಾರಸು ಮಾಡಿದರೆ ಮಾತ್ರ ಔಷಧಿ

ಪಿಟಿಐ
Published 6 ಅಕ್ಟೋಬರ್ 2025, 11:25 IST
Last Updated 6 ಅಕ್ಟೋಬರ್ 2025, 11:25 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತಿರುವನಂತಪುರ: ವೈದ್ಯರು ಶಿಫಾರಸು ಮಾಡಿದರೆ ಮಾತ್ರ 12 ವರ್ಷದ ಒಳಗಿನ ಮಕ್ಕಳಿಗೆ ಔಷಧ ನೀಡಬೇಕು ಎಂದು ಕೇರಳ ಆರೋಗ್ಯ ಇಲಾಖೆ ಸೋಮವಾರ ಆದೇಶಿಸಿದೆ.

ಮಕ್ಕಳಲ್ಲಿ ಕೆಮ್ಮಿನ ಔಷಧಿಗಳ ಬಳಕೆಯ ಅಧ್ಯಯನ ಮಾಡಲು ಮೂವರು ತಜ್ಞರ ಸಮಿತಿ ರಚಿಸಿದ್ದು, ತುರ್ತು ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರು ಉನ್ನತ ಮಟ್ಟದ ಸಭೆಯ ನಂತರ ಇಲ್ಲಿ ತಿಳಿಸಿದರು.

ADVERTISEMENT

ರಾಜ್ಯ ಔಷಧ ನಿಯಂತ್ರಕ, ಮಕ್ಕಳ ಆರೋಗ್ಯ ನೋಡಲ್‌ ಅಧಿಕಾರಿ ಮತ್ತು ಭಾರತೀಯ ಮಕ್ಕಳ ತಜ್ಞರ ಅಕಾಡೆಮಿಯ ರಾಜ್ಯ ಘಟಕದ ಅಧ್ಯಕ್ಷರು ಸಮಿತಿಯ ಸದಸ್ಯರಾಗಿದ್ದಾರೆ.

ಈ ಸಮಿತಿ ನೀಡುವ ವರದಿಯು ಮಕ್ಕಳಲ್ಲಿ ಕೆಮ್ಮು ಸಿರಪ್‌ ಬಳಕೆಗೆ ಹೊಸ ಮಾರ್ಗಸೂಚಿ ರೂಪಿಸಲು ಸಹಾಯ ಮಾಡಲಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವೈದ್ಯರು ಈ ಹಿಂದೆಯೇ ನೀಡಿದ್ದ ಔಷಧ ಸಲಹಾ ಚೀಟಿಗಳನ್ನು ಬಳಸಿಕೊಂಡು ಔಷಧಿಗಳನ್ನು ವಿತರಿಸಬಾರದು. ಈ ಕುರಿತಂತೆ ಔಷಧ ನಿಯಂತ್ರಕರಿಗೆ ನಿರ್ದೇಶನ ನೀಡಲಾಗಿದೆ’ ಎಂದೂ ವೀಣಾ ಹೇಳಿದ್ದಾರೆ.

‘ಮಕ್ಕಳಿಗೆ ಔಷಧಿಗಳನ್ನು ಅವರ ದೇಹದ ತೂಕಕ್ಕೆ ಅನುಗುಣವಾಗಿ ಸೂಚಿಸಲಾಗುವುದರಿಂದ, ಒಂದು ಮಗುವಿಗೆ ನೀಡಲಾದ ಔಷಧಿಯನ್ನೇ ಮತ್ತೊಂದು ಮಗುವಿಗೂ ನೀಡಬಾರದು. ಹಾಗೆ ಮಾಡುವುದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು’ ಎಂದಿದ್ದಾರೆ.

ಕೆಮ್ಮಿನ ಸಿರಪ್‌ಗೆ ಸಂಬಂಧಿಸಿದಂತೆ ಕೇರಳದಲ್ಲಿ ಯಾವುದೇ ಸಮಸ್ಯೆಯ ವರದಿ ಆಗಿಲ್ಲ ಎಂದು ವೈದ್ಯರು ಸಭೆಗೆ ತಿಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಎಸ್‌ಆರ್‌–13 ಬ್ಯಾಚ್‌ನ ಕೋಲ್ಡ್ರಿಫ್‌ ಸಿರಪ್‌ ಸೇವಿಸಿದ ಕೆಲವು ಮಕ್ಕಳು ಬೇರೆ ರಾಜ್ಯಗಳಲ್ಲಿ ಮೃತಪಟ್ಟಿದ್ದರಿಂದ, ಡ್ರಗ್ಸ್‌ ನಿಯಂತ್ರಣ ಇಲಾಖೆಯು ರಾಜ್ಯದಲ್ಲಿ ಅದರ ಮಾರಾಟವನ್ನು ಸ್ಥಗಿತಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.