ತಿರುವನಂತಪುರ: ಮಲಯಾಳ ಸಿನಿಮಾ ಕ್ಷೇತ್ರದಲ್ಲಿ ನಡೆಯುತ್ತಿರುವ ತಾರತಮ್ಯವನ್ನು ಹೋಗಲಾಡಿಸಲು ಕೇರಳ ಸರ್ಕಾರ ಇಲ್ಲಿ ಆಯೋಜಿಸಿದ್ದ ಎರಡು ದಿನದ ಕಾರ್ಯಾಗಾರದಲ್ಲಿಯೇ ‘ತಾರತಮ್ಯ’ದ ಕೂಗು ಕೇಳಿಬಂದು, ಪ್ರತಿಭಟನೆಗೂ ಸಾಕ್ಷಿಯಾಯಿತು.
ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕ, ಪದ್ಮಶ್ರೀ ಪುರಸ್ಕೃತ ಅಡೂರ್ ಗೋಪಾಲಕೃಷ್ಣನ್, ‘ಪರಿಶಿಷ್ಟ ಜಾತಿ (ಎಸ್.ಸಿ), ಪರಿಶಿಷ್ಟ ಪಂಗಡ (ಎಸ್.ಟಿ) ಹಾಗೂ ಮಹಿಳೆಯರು ನಿರ್ಮಾಣ ಮಾಡುವ ಸಿನಿಮಾಗಳಿಗೆ ಕೇರಳ ರಾಜ್ಯ ಸಿನಿಮಾ ಅಭಿವೃದ್ಧಿ ನಿಗಮವು ₹1.50 ಕೋಟಿ ನೆರವು ನೀಡುತ್ತಿದೆ. ಆದರೆ, ನಿರೀಕ್ಷಿತ ಫಲಿತಾಂಶ ಬಾರದ ಕಾರಣ, ಅದನ್ನು ಪರಿಷ್ಕರಿಸಬೇಕಾಗಿದೆ’ ಎಂದು ತಿಳಿಸಿದರು.
‘ಸಿನಿಮಾ ನಿರ್ಮಾಣಕ್ಕೆ ಬರುವ ಎಸ್.ಸಿ ಹಾಗೂ ಎಸ್.ಟಿ ಸಮುದಾಯದವರಿಗೆ ತಜ್ಞರಿಂದ ಮೂರು ತಿಂಗಳ ಕಾಲ ತರಬೇತಿ ನೀಡಬೇಕು. ₹1.5 ಕೋಟಿ ಮೊತ್ತವನ್ನು ಮೂವರಿಗೆ ಸಮಾನವಾಗಿ ತಲಾ ₹50 ಲಕ್ಷ ಹಂಚಬೇಕು. ಅವರಿಗೆ ನೀಡುವ ಹಣ ಸಾರ್ವಜನಿಕರ ಹಣ ಎಂಬುದು ಎಂದು ಅರಿವು ಹೊಂದಿರಬೇಕು, ಹೀಗಾಗಿ ಗುಣಮಟ್ಟದ ಸಿನಿಮಾ ನಿರ್ಮಾಣ ಮಾಡಬೇಕು. ಅದೇ ರೀತಿ, ಸಿನಿಮಾ ನಿರ್ಮಾಣಕ್ಕೆ ಬರುವ ಮಹಿಳೆಯರಿಗೂ ನಿರಂತರ ತರಬೇತಿ ನೀಡಿದ ಬಳಿಕವೇ, ಸರ್ಕಾರದ ಅನುದಾನ ನೀಡಬೇಕು’ ಎಂದು ಸಲಹೆ ನೀಡಿದರು.
ಆಕ್ರೋಶ: ಅಡೂರ್ ಅವರು ಹೇಳಿಕೆ ನೀಡುತ್ತಿದ್ದಂತೆಯೇ, ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರೇಕ್ಷಕರು ‘ತಾರತಮ್ಯ’ದ ಆರೋಪ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.
‘ನಿರ್ಲಕ್ಷಿತ ಸಮುದಾಯ ಹಾಗೂ ಮಹಿಳೆಯರು ಸಿನಿಮಾ ನಿರ್ಮಾಣ ಮಾಡಲು ಕಷ್ಟಪಡುತ್ತಿದ್ದಾರೆ. ಈಗಿನ ಸ್ಥಿತಿಗತಿಯಲ್ಲಿ ₹50 ಲಕ್ಷದಲ್ಲಿ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಅಡೂರ್ ಗೋಪಾಲಕೃಷ್ಣನ್ ಅವರು ಕೂಡಲೇ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು’ ಎಂದು ದಲಿತ ಲೇಖಕ ಹಾಗೂ ಹೋರಾಟಗಾರ್ತಿ ಸನ್ನಿ ಕಾಪಿಕಾಡು ಒತ್ತಾಯಿಸಿದರು.
‘ಮಲಯಾಳ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹಿಳೆಯರು ನೀಡಿದ ದೂರು ಆಧರಿಸಿ ‘ಹೇಮಾ ಸಮಿತಿ’ ರಚಿಸಲಾಯಿತು. ಪೊಲೀಸರು ತನಿಖೆ ಆರಂಭಿಸಿದಾಗ ಕೆಲವರು, ದೂರು ಹಿಂಪಡೆದರು, ಇದರಿಂದ ಏನೂ ಪ್ರಯೋಜವಾಗಿಲ್ಲ’ ಎಂದು ಸಂಗೀತ ನಿರ್ದೇಶಕ ಶ್ರೀ ಕುಮಾರ್ ಥಂಪಿ ತಿಳಿಸಿದರು.
ಕಾರ್ಯಾಗಾರದಲ್ಲಿ ಕೇರಳ ಸರ್ಕಾರವು ‘ಸಿನಿಮಾ ನೀತಿ’ಯನ್ನು ಪ್ರಕಟಿಸಿತು. ಸಿನಿಮಾ ಕ್ಷೇತ್ರದಲ್ಲಿ ತಾರತಮ್ಯವನ್ನು ಹೋಗಲಾಡಿಸುವ ಗುರಿಯನ್ನು ನೀತಿ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.