ಕೊಚ್ಚಿಯಲ್ಲಿ ರಸ್ತೆ ಜಲಾವೃತಗೊಂಡಿರುವುದು
– ಪಿಟಿಐ ಚಿತ್ರ
ತಿರುವನಂತಪುರ: ಕೇರಳದಲ್ಲಿ ಮುಂಗಾರು ಮಳೆ ಬಿರುಸು ಪಡೆದುಕೊಂಡಿದ್ದು, ರಾಜ್ಯದಾದ್ಯಂತ ಭಾರಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ರಾಜ್ಯದ ಉತ್ತರ ಜಿಲ್ಲೆಗಳ ಎತ್ತರದ ಪ್ರದೇಶಗಳು ಮತ್ತು ನೆರೆಯ ಪಟ್ಟಣಗಳಲ್ಲಿ ರಸ್ತೆಗಳು ಮುಳುಗಿ, ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.
ನದಿಗಳು ಉಕ್ಕಿ ಹರಿದಿದ್ದೇ ತಗ್ಗು ಪ್ರದೇಶಗಳು ಮುಳುಗಡೆಯಾಗಲು ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.
ಕಾಸರಗೋಡಿನಲ್ಲಿ ಮಧುವಾಹಿನಿ ನದಿ ಉಕ್ಕಿ ಹರಿದು ರಸ್ತೆಗಳನ್ನು ಹಾಳು ಮಾಡಿದೆ. ಅನೇಕ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ಪ್ರವಾಹವು ನೆಲಮಹಡಿಗೆ ಪ್ರವೇಶಿಸುತ್ತಿದ್ದಂತೆ ಜನರನ್ನು ತಮ್ಮ ಮನೆಗಳ ಮೊದಲ ಮಹಡಿಗೆ ಸ್ಥಳಾಂತರಗೊಂಡರು.
ಕೋಯಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿಯೂ ಸಹ ಭಾರೀ ಮಳೆಯಿಂದಾಗಿ ವ್ಯಾಪಕ ನಾಶನಷ್ಟ ಸಂಭವಿಸಿದೆ.
ಕಣ್ಣೂರಿನ ಪಯ್ಯನ್ನೂರಿನಲ್ಲಿ ಅನೇಕ ಮನೆಗಳ ಮುಂದೆ ನಾಡ ಹಾಗೂ ಫೈಬರ್ ದೋಣಿಗಳನ್ನು ಕಟ್ಟಿರುವುದು ಕಂಡುಬಂದಿದೆ.
‘ಪ್ರವಾಹದ ನೀರು ಕಡಿಮೆಯಾಗದಿದ್ದರೆ ಆಶ್ರಯ ಶಿಬಿರಗಳಿಗೆ ತೆರಳಬೇಕಾಗಬಹುದು ಎಂಬ ಭಯ ನಮಗಿದೆ. ಹೀಗಾಗಿ ದೋಣಿಗಳನ್ನು ಸಿದ್ಧವಾಗಿಟ್ಟುಕೊಂಡಿದ್ದೇವೆ’ ಎಂದು ವೃದ್ಧರೊಬ್ಬರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಕೊಟ್ಟಯಂ ಜಿಲ್ಲೆಯಲ್ಲಿ ಇದುವರೆಗೆ 46 ಆಶ್ರಯ ಶಿಬಿರಗಳನ್ನು ತೆರೆಯಲಾಗಿದ್ದು, ಪ್ರಸ್ತುತ 1,136 ಜನರು ಅವುಗಳಲ್ಲಿ ವಾಸಿಸುತ್ತಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ಇತ್ತೀಚಿನ ಮಾಹಿತಿ ಪ್ರಕಾರ, ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಯಂ, ಇಡುಕ್ಕಿ, ಎರ್ನಾಕುಳಂ, ತ್ರಿಶೂರ್, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.