ADVERTISEMENT

ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಆರೋಪಿಗಳ ಬಂಧನ, ಭುಗಿಲೆದ್ದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 6:16 IST
Last Updated 16 ಜುಲೈ 2020, 6:16 IST
ಕೇರಳಲ್ಲಿ ಪ್ರತಿಭಟಿಸುತ್ತಿರುವ ಯುವ ಕಾಂಗ್ರೆಸ್‌ ಕಾರ್ಯಕರ್ತರು
ಕೇರಳಲ್ಲಿ ಪ್ರತಿಭಟಿಸುತ್ತಿರುವ ಯುವ ಕಾಂಗ್ರೆಸ್‌ ಕಾರ್ಯಕರ್ತರು   

ತಿರುವನಂತಪುರ: ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಮತ್ತೆ ಇಬ್ಬರು ಆರೋಪಿಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಕೊಚ್ಚಿಯಲ್ಲಿ ಗುರುವಾರ ಬೆಳಿಗ್ಗೆ ಬಂಧಿಸಿದ್ದಾರೆ.

ಮಲಪ್ಪುರಂ ನಿವಾಸಿಗಳಾದ ಮೊಹಮ್ಮದ್ ಅನ್ವರ್ ಟಿ.ಎಂ. ಮತ್ತು ಸೈದಲವಿ ಬಂಧಿತರಾಗಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳಾದ ಸ್ವಪ್ನಾ ಸುರೇಶ್‌ ಮತ್ತು ಸಂದೀಪ್‌ ನಾಯರ್‌ ಅವರನ್ನು ರಾಷ್ಟ್ರೀಯ ತನಿಖಾ ದಳದ ಪೊಲೀಸರು ಇತ್ತೀಚಿಗೆ ಬೆಂಗಳೂರಿನಲ್ಲಿ ಬಂಧಿಸಿದ್ದರು.

ಮೂವರು ಆರೋಪಿಗಳಾದ ಎರ್ನಾಕುಲಂನ ಜಲಾಲ್‌, ಮಲಪ್ಪುರಂನ ಮೊಹಮ್ಮದ್‌ ಶಫಿ, ಹಮ್ಜದ್ ಅಲಿ ಅವರನ್ನು ಬುಧವಾರ ಬಂಧಿಸಲಾಗಿತ್ತು.

ADVERTISEMENT

ಚಿನ್ನದ ಕಳ್ಳ ಸಾಗಣೆಯಲ್ಲಿ ಅರಬ್‌ ಸಂಯುಕ್ತ ರಾಷ್ಟ್ರಗಳ ದೂತಾವಾಸದ ಮಾಜಿ ಸಿಬ್ಬಂದಿ ಜತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್‌ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಅವರಿಂದ ರಾಜೀನಾಮೆ ಪಡೆಯಲಾಗಿತ್ತು. ಕಸ್ಟಮ್ಸ್‌ಅಧಿಕಾರಿಗಳು ಎಂ.ಶಿವಶಂಕರ್ ಅವರನ್ನು ಬುಧವಾರ ಸುಮಾರು ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

ಈ ಪ್ರಕರಣವು ಕೇರಳದಲ್ಲಿ ಭಾರಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಬುಧವಾರ ಕೇರಳದ ಯುವ ಕಾಂಗ್ರೆಸ್‌ ಕಾರ್ಯಕರ್ತರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ರಾಜೀನಾಮೆಗೆ ಅಲ್ಲಿನ ವಿರೋಧ ಪಕ್ಷಗಳು ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.