ADVERTISEMENT

ಕೇರಳ ಚಿನ್ನ ಸಾಗಣೆ ಪ್ರಕರಣ: ಆರೋಪಿ ಸ್ವಪ್ನ, ಸಂದೀಪ್‌ಗೆ ನ್ಯಾಯಾಂಗ ಬಂಧನ

ಏಜೆನ್ಸೀಸ್
Published 12 ಜುಲೈ 2020, 14:28 IST
Last Updated 12 ಜುಲೈ 2020, 14:28 IST
ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್‌ ನಾಯರ್‌ (ಮಧ್ಯದಲ್ಲಿರುವವರು), ಸ್ವಪ್ನಾ ಸುರೇಶ್ (ಬಲಗಡೆ ಕೊನೆ)
ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್‌ ನಾಯರ್‌ (ಮಧ್ಯದಲ್ಲಿರುವವರು), ಸ್ವಪ್ನಾ ಸುರೇಶ್ (ಬಲಗಡೆ ಕೊನೆ)   

ಕೊಚ್ಚಿ: ಕೇರಳದ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಯಲಾಗಿದ್ದ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್‌ ನಾಯರ್‌ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಜುಲೈ 5ರಂದು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ರಾಜತಾಂತ್ರಿಕ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಿದ್ದಾಗ ₹15 ಕೋಟಿ ಮೌಲ್ಯದ 30 ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಆದರೆ, ಆರೋಪಿಗಳು ಕೇರಳ, ತಮಿಳುನಾಡು ದಾಟಿ ಬೆಂಗಳೂರಿನಲ್ಲಿ ಅಡಗಿದ್ದರು.

ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಸ್ವಪ್ನಾ ಸುರೇಶ್ ಮತ್ತು ಸಂದೀಪ್‌ ನಾಯರ್‌ನನ್ನು ಬಂಧಿಸಿದ ಎನ್‌ಐಎ ಭಾನುವಾರ ಬೆಳಿಗ್ಗೆ ಕೊಚ್ಚಿಗೆ ಕರೆತಂದಿತ್ತು. ಎನ್‌ಐಎ ವಿಶೇಷ ಕೋರ್ಟ್‌ ಮುಂದೆ ಇಬ್ಬರೂ ಆರೋಪಿಗಳನ್ನು ಹಾಜರು ಪಡಿಸಲಾಯಿತು.

ADVERTISEMENT

ವಿಚಾರಣೆ ನಡೆಸಲು ಆರೋ‍ಪಿಗಳನ್ನು ವಶಕ್ಕೆ ನೀಡುವಂತೆ ಎನ್‌ಐಎ ಮನವಿ ಸಲ್ಲಿಸಿದ್ದು, ಕೋರ್ಟ್‌ ಸೋಮವಾರ ಮನವಿ ಪರಿಗಣಿಸಲಿದೆ. ಪ್ರಸ್ತುತ ಕೋರ್ಟ್‌ ನ್ಯಾಯಾಂಗ ವಶಕ್ಕೆ ಆದೇಶಿಸಿದ್ದು, ಕಡ್ಡಾಯವಾಗಿ ಕೋವಿಡ್‌–19 ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ಗೆ ತ್ರಿಶ್ಶೂರ್‌ ಜಿಲ್ಲೆಯಲ್ಲಿ ಹಾಗೂ ಸಂದೀಪ್‌ ನಾಯರ್‌ಗೆ ಕರುಕುಟ್ಟಿಯ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ ಎಂದು ಎಎನ್ಐ ಟ್ವೀಟಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅರಬ್‌ ಸಂಯುಕ್ತ ರಾಷ್ಟ್ರಗಳ ದೂತಾವಾಸದ ಮಾಜಿ ಸಿಬ್ಬಂದಿ ಜತೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕಳೆದ ವಾರ ಹುದ್ದೆಯಿಂದ ತೆರವುಗೊಳಿಸಲಾಗಿತ್ತು. ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಗಳು ಕೇರಳ, ತಮಿಳುನಾಡು ಗಡಿ ದಾಟಿ ಬೆಂಗಳೂರು ತಲುಪಿದ್ದರ ಬಗ್ಗೆ ಇತರ ರಾಜಕೀಯ ನಾಯಕರೂ ಅನುಮಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.