ADVERTISEMENT

ಪ‍ತ್ರಿಕಾಗೋಷ್ಠಿಯಿಂದ 2 ಮಲಯಾಳಂ ಚಾನೆಲ್‌ಗಳಿಗೆ ನಿರ್ಬಂಧ ಹೇರಿದ ಕೇರಳ ರಾಜ್ಯಪಾಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2022, 12:27 IST
Last Updated 7 ನವೆಂಬರ್ 2022, 12:27 IST
   

ಕೊಚ್ಚಿ: ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರು ತಮ್ಮ ಪತ್ರಿಕಾಗೋಷ್ಠಿಗೆ ಎರಡು ಮಲಯಾಳಂ ಚಾನೆಲ್‌ಗಳಿಗೆ ನಿರ್ಬಂಧ ವಿಧಿಸಿದ ಘಟನೆ ಸೋಮವಾರ ನಡೆದಿದೆ.

ಕೈರಳಿ ನ್ಯೂಸ್‌ ಹಾಗೂ ಮೀಡಿಯಾ ಒನ್‌ ಚಾನೆಲ್‌ನ ವರದಿಗಾರರಿಗೆ ಸ್ಥಳದಿಂದ ಹೊರಗೆ ಹೋಗಿ ಎಂದು ತಾಕೀತು ಮಾಡಿದ ರಾಜ್ಯಪಾಲರು, ನಾನು ಈ ಎರಡು ಚಾನೆಲ್‌ಗಳನ್ನು ಕರೆಯುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಈ ಎರಡು ಚಾನೆಲ್‌ಗಳು ಮಾಧ್ಯಮದ ವೇಷ ಹಾಕಿದ ರಾಜಕೀಯ ಮಿತ್ರರು ಎಂದು ಆರೋಪಿಸಿದ್ದಾರೆ.

ಈ ಎರಡು ಚಾನೆಲ್‌ಗಳನ್ನು ಪತ್ರಿಕಾಗೋಷ್ಠಿ ನಡೆಯುವ ಸ್ಥಳದಿಂದ ಹೊರಗೆ ನಡೆಯಿರಿ ಎಂದು ಹೇಳಿದ ರಾಜ್ಯಪಾಲರು, ‘ಮಾಧ್ಯಮ ಅತಿ ಮುಖ್ಯ ಎಂದು ನಾನು ಪರಿಗಣಿಸುತ್ತೇನೆ. ನಾನು ಯಾವಾಗಲೂ ಮಾಧ್ಯಮಗಳಿಗೆ ಉತ್ತರ ನೀಡಿದ್ದೇನೆ. ಆದರೆ ಮಾಧ್ಯಮ ಎನ್ನುವ ವೇಷ ಹಾಕಿದವರನ್ನು ಮನವೊಲಿಸಲು ನನಗೆ ಸಾಧ್ಯವಿಲ್ಲ. ಅವರು ಮಾಧ್ಯಮದವರಲ್ಲ, ಮಾಧ್ಯಮದ ವೇಷ ಧರಿಸಿದ ರಾಜಕೀಯ ಮಿತ್ರರು‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕೆಲ ರಾಜಕೀಯ ಪಕ್ಷದ ಸದಸ್ಯರು ಇಲ್ಲಿ ಇದ್ದಾರೆ. ಈ ಚಾನೆಲ್‌ಗಳ ‍ಪ್ರತಿನಿಧಿಗಳು ಯಾರಾದರೂ ಈ ಪ‍ತ್ರಿಕಾಗೋಷ್ಠಿಯಲ್ಲಿ ಇದ್ದರೆ ದಯಮಾಡಿ ಹೋಗಿ. ಕೈರಳಿ ಹಾಗೂ ಮೀಡಿಯಾ ಒನ್‌ ಚಾನೆಲ್‌ನ ‍ಪ್ರತಿನಿಧಿಗಳು ಇಲ್ಲಿ ಇದ್ದರೆ ನಾನು ‌ಹೊರ ನಡೆಯುತ್ತೇನೆ. ಸ್ಪಷ್ಟವಾಗಿ ಹೇಳುತ್ತೇನೆ ಕೈರಳಿ ಹಾಗೂ ಮಿಡಿಯಾ ಒನ್‌ನೊಂದಿಗೆ ನಾನು ಮಾತನಾಡುವುದಿಲ್ಲ‘ ಎಂದು ಹೇಳಿದ್ದಾರೆ.

ಕೊಚ್ಚಿಯಲ್ಲಿರುವ ಗೆಸ್ಟ್‌ ಹೌಸ್‌ನಲ್ಲಿ ಈ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿತ್ತು.

ಈ ಹಿಂದೆ ಈ ಎರಡೂ ಚಾನೆಲ್‌ ಸೇರಿದಂತೆ ಒಟ್ಟು 4 ಮಲಯಾಳಂ ಚಾನೆಲ್‌ಗಳಿಗೆ ರಾಜ್ಯಪಾಲರ ಪತ್ರಿಕಾಗೋಷ್ಠಿಗೆ ಹಾಜರಾಗುವುದಕ್ಕೆ ರಾಜಭವನ ನಿಷೇಧ ಹೇರಿತ್ತು.

ಕೈರಳಿ ನ್ಯೂಸ್‌ ಆಡಳಿತರೂಢ ಸಿಪಿಐ (ಎಂ) ಒಡೆತನದ್ದಾಗಿದೆ. ಭದ್ರತಾ ಕಾರಣಗಳನ್ನು ನೀಡಿ ಮೀಡಿಯಾ ಒನ್‌ ಚಾನೆಲ್‌ ‍ಪ್ರಸಾರಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.