ರಾಹುಲ್ ಮಾಂಕೂಟತ್ತಿಲ್
ಕೊಚ್ಚಿ: ಲೈಂಗಿಕ ದೌರ್ಜನ್ಯ ಅರೋಪ ಪ್ರಕರಣದಲ್ಲಿ ಕಾಂಗ್ರೆಸ್ ಉಚ್ಚಾಟಿತ ಶಾಸಕ ರಾಹುಲ್ ಮಾಂಕೂಟತ್ತಿಲ್‌ಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಆರೋಪಿಯ ಕಸ್ಟಡಿ ವಿಚಾರಣೆ ಅಗತ್ಯ ಇದೆ ಎನ್ನುವುದನ್ನು ನಿರೂಪಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ.
ದೂರುದಾರರ ನಡವಳಿಕೆ ಗಮನಿಸಿದರೆ, ಮೇಲ್ನೋಟಕ್ಕೆ ಆಕೆ ಹಾಗೂ ಮಾಂಕೂಟತ್ತಿಲ್ ನಡುವೆ ಸಮ್ಮತಿಯ ಲೈಂಗಿಕ ಸಂಬಂಧ ಇತ್ತು ಎನ್ನುವುದು ತೋರುತ್ತದೆ. ಆದರೆ ತನಿಖೆಯಲ್ಲಿ ತಿಳಿದುಬರಬೇಕು ಎಂದು ನ್ಯಾಯಮೂರ್ತಿಗಳಾದ ಕೌಸರ್ ಎಡಪ್ಪಗತ್ತ್ ಹೇಳಿದರು.
ದೂದುದಾರೆ ವಿವಾಹಿತೆ ಹಾಗೂ ಪ್ರೌಢಳಾಗಿದ್ದು, ಶಾಸಕರನ್ನು ತನ್ನ ಆಪಾರ್ಟ್‌ಮೆಂಟ್‌ಗೆ ಕರೆಸಿಕೊಳ್ಳುವುದು, ಅವರೊಂದಿಗೆ ಉಳಿದುಕೊಳ್ಳಲು ಪಾಲಕ್ಕಾಡ್‌ಗೆ ಪ್ರಯಾಣಿಸುವುದರ ಹಿಂದೆ ದೈಹಿಕ ಸಂಬಂಧದ ಉದ್ದೇಶ ಇಲ್ಲ ಎನ್ನುವುದನ್ನು ನಂಬಲು ಕಷ್ಟ ಎಂದು ಕೋರ್ಟ್ ನುಡಿಯಿತು.
ದೂರುದಾರೆ ಹಾಗೂ ಶಾಸಕರ ನಡುವಿನ ಮತ್ತು ದೂರುದಾರೆ ಹಾಗೂ ಶಾಸಕರ ಸ್ನೇಹಿತನ ನಡುವಿನ ವಾಟ್ಸ್‌ಆ್ಯಪ್ ಸಂಭಾಷಣೆಗಳು ಗಟ್ಟಿಯಾದ ವೈಯಕ್ತಿಕ ಸಂಬಂಧವನ್ನು ಸೂಚಿಸುತ್ತವೆಯೇ ಹೊರತು ಬಲವಂತವನ್ನಲ್ಲ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.
ಇಬ್ಬರು ವಯಸ್ಕರು ಸ್ವಯಂಪ್ರೇರಿತರಾಗಿ ದೀರ್ಘಕಾಲ ಲೈಂಗಿಕ ಸಂಬಂಧದಲ್ಲಿ ಇದ್ದು
ಸಂಬಂಧ ಹಾಳಾದ ಬಳಿಕ ಲೈಂಗಿಕ ಸಂಬಂಧ ಇದ್ದುದ್ದನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು. ಅದನ್ನು ಒಪ್ಪಿತ ಸಂಬಂಧವೆಂದೇ ಪರಿಗಣಿಸಬೇಕಲ್ಲದೆ, ಅದನ್ನು ಲೈಂಗಿಕ ದೌರ್ಜನ್ಯ ಎಂದು ಹೇಳಲಾಗದು ಎಂದು ಕೋರ್ಟ್ ನುಡಿದಿದೆ.
ಸಂಬಂಧ ಮುರಿದ ಬಳಿಕ ಒಪ್ಪಿತ ಲೈಂಗಿಕ ಸಂಬಂಧವನ್ನು ಅತ್ಯಾಚಾರ ಎಂದು ದೂರು ದಾಖಲಿಸುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸುಪ್ತೀಂ ಕೋರ್ಟ್ ಕೂಡ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಕೋರ್ಟ್ ಹೇಳಿದೆ.
ಗರ್ಭಪಾತ ಮಾಡಿಸಿಕೊಳ್ಳಲು ಶಾಸಕ ಬಲವಂತ ಮಾಡಿದ್ದಾನೆ ಎನ್ನುವ ಆರೋಪದ ಬಗ್ಗೆಯೂ ಟಿಪ್ಪಣಿ ಮಾಡಿದ ಕೋರ್ಟ್, ಅವರಿಬ್ಬರ ನಡುವಿನ ವಾಟ್ಸ್‌ಆ್ಯಪ್ ಸಂಭಾಷಣೆಗಳನ್ನು ನೋಡಿದರೆ ಗರ್ಭಪಾತ ಮಾಡಿಸಿಕೊಳ್ಳಲು ಆಕೆ ಒಪ್ಪಿಕೊಂಡಿದ್ದಾಳೆ ಎನ್ನುವುದು ಗೊತ್ತಾಗುತ್ತದೆ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.