
ಗೌರವಧನವನ್ನು ಹೆಚ್ಚಿಸುವಂತೆ ಒತ್ತಾಯಿಸಿ ಕೇರಳದ ತಿರುವನಂತಪುರದಲ್ಲಿ ಸೋಮವಾರ ಆಶಾ ಕಾರ್ಯಕರ್ತೆಯರು ತಮ್ಮ ಕೂದಲು ಕತ್ತರಿಸಿ ಪ್ರತಿಭಟನೆ ನಡೆಸಿದರು
–ಪಿಟಿಐ ಚಿತ್ರ
ತಿರುವನಂತಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕೇರಳದ ಸಚಿವಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಬೇಡಿಕೆ ಈಡೇರಿಸಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ತಲೆಕೂದಲು ಕತ್ತರಿಸಿಕೊಂಡರೆ, ಕೆಲವರು ಪೂರ್ತಿ ತಲೆ ಬೋಳಿಸಿಕೊಂಡ ಪ್ರಸಂಗವೂ ನಡೆಯಿತು.
ಪ್ರತಿಭಟನೆ ಸೋಮವಾರ 50ನೇ ದಿನಕ್ಕೆ ಕಾಲಿಟ್ಟಿತು. ಕಾರ್ಯಕರ್ತೆಯರು ಹೋರಾಟವನ್ನು ಮತ್ತೊಂದು ಸ್ವರೂಪಕ್ಕೆ ಕೊಂಡೊಯ್ದರು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ನೂರಾರು ಮಂದಿ ಕೂದಲು ಕತ್ತರಿಸಿಕೊಳ್ಳುವಾಗ ಪರಸ್ಪರ ಕಣ್ಣೀರಿಟ್ಟು ಸಂತೈಸಿಕೊಂಡರು. ನಂತರ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತೀವ್ರ ಹತಾಶೆಗೊಳಗಾದ ಕಾರ್ಯಕರ್ತೆಯೊಬ್ಬರು ಪೂರ್ತಿ ತಲೆ ಬೋಳಿಸಿಕೊಂಡರು. ನಂತರ, ಕೆಲವರು ಕೂಡ ಇದೇ ರೀತಿ ಪ್ರತಿಭಟನೆ ದಾಖಲಿಸಿದರು.
‘ನಮ್ಮ ಜೀವನವೇ ಕತ್ತರಿಸಲ್ಪಟ್ಟಿದೆ. ಕಾರ್ಯಕರ್ತೆಯರ ನೋವು ಹಾಗೂ ಸಮಸ್ಯೆಗಳನ್ನು ಕಂಡು ಸಚಿವರು ಕುರುಡರಂತೆ ವರ್ತಿಸುತ್ತಿದ್ದು, ಅವರ ವರ್ತನೆ ಖಂಡಿಸಿ ಈ ರೀತಿ ಮಾಡಿದ್ದೇವೆ. ದಿನಕ್ಕೆ ₹232 ಗೌರವಧನದಲ್ಲಿ ಹೇಗೆ ಜೀವನ ನಡೆಸಲು ಸಾಧ್ಯ‘? ಎಂದು ಕಾರ್ಯಕರ್ತೆಯೊಬ್ಬರು ಅಳಲು ತೋಡಿಕೊಂಡರು.
‘ಸರ್ಕಾರ ಬೇಡಿಕೆ ಈಡೇರಿಸಲು ಒಪ್ಪಿಕೊಳ್ಳದಿದ್ದರೆ, ಎಲ್ಲ ಪ್ರತಿಭಟನಕಾರರು ಸಾಯಲು ಸಿದ್ಧ’ ಎಂದು ಎಚ್ಚರಿಸಿದರು.
ರಾಜಧಾನಿ ಮಾತ್ರವಲ್ಲದೇ, ಆಲಪುಳ, ಅಂಕಮಾಲಿ ತಾಲ್ಲೂಕಿನಲ್ಲಿ ಕೂದಲು ಕತ್ತರಿಸಿ ಪ್ರತಿಭಟಿಸಿದರು. ಮಹಿಳೆಯರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ನಿಟ್ಟಿನಲ್ಲಿ ಕೆಲವು ಪುರುಷರು ಕೂಡ ತಲೆ ಬೋಳಿಸಿಕೊಂಡರು.
ಕಳೆದ ವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು.
ನಿವೃತ್ತಿಯ ನಂತರದ ಪ್ರಯೋಜನ ಹಾಗೂ ಗೌರವಧನ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಆಶಾ ಕಾರ್ಯಕರ್ತೆಯರು ಕಳೆದ ಕೆಲವು ವಾರಗಳಿಂದ ಕೇರಳದ ಸಚಿವಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೇಡಿಕೆ ಈಡೇರಿಕೆಗೆ ಹಿಂದೇಟು: ‘ಗೌರವಧನ ಏರಿಕೆ ಮಾಡುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿಯೂ ಇದೆ’ ಎಂದು ಕೇರಳ ಎಡಪಂಥೀಯ ಸರ್ಕಾರವು ಸ್ಪಷ್ಪಪಡಿಸಿದೆ.
‘ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ (ಎನ್‌ಎಚ್‌ಎಂ) 2023–24ರ ಅವಧಿಯಲ್ಲಿ ಆಶಾ ಸೇರಿದಂತೆ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಯಾವುದೇ ಅನುದಾನವನ್ನು ಕೇಂದ್ರ ಸರ್ಕಾರ ನೀಡಿಲ್ಲ’ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.
ಆರೋಪವನ್ನು ತಳ್ಳಿಹಾಕಿರುವ ಕೇಂದ್ರ ಸರ್ಕಾರ, ‘ಬಾಕಿ ನೀಡಬೇಕಿದ್ದ ಹಣವನ್ನು ಈಗಾಗಲೇ ನೀಡಿದೆ, ಕೇರಳ ಸರ್ಕಾರವು ಅನುದಾನ ಬಳಕೆ ಪ್ರಮಾಣಪತ್ರವನ್ನು ನೀಡಿಲ್ಲ. ಪತ್ರ ಬಂದ ತಕ್ಷಣವೇ, ಆಶಾ ಕಾರ್ಯಕರ್ತೆಯರಿಗೆ ನೀಡಬೇಕಿರುವ ಅಗತ್ಯ ಮೊತ್ತವನ್ನು ನೀಡಲಾಗುವುದು’ ಎಂದು ಸ್ಪಷ್ಟಪಡಿಸಿತ್ತು.
‘ಆಶಾ ಕಾರ್ಯಕರ್ತೆಯರ ಗೌರವಧನ ಏರಿಕೆ ಮಾಡಲು ಎನ್‌ಎಚ್‌ಎಂನ ಸಂಚಾಲನ ಸಮಿತಿಯು ನಿರ್ಧರಿಸಿದೆ’ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಸಂಸತ್‌ನಲ್ಲಿಯೇ ಇತ್ತೀಚಿಗೆ ಘೋಷಿಸಿದ್ದರು.
ಗೌರವಧನವನ್ನು ಹೆಚ್ಚಿಸುವಂತೆ ಒತ್ತಾಯಿಸಿ ಕೇರಳದ ತಿರುವನಂತಪುರದಲ್ಲಿ ಸೋಮವಾರ ಆಶಾ ಕಾರ್ಯಕರ್ತೆಯರು ತಮ್ಮ ಕೂದಲು ಕತ್ತರಿಸಿ ಪ್ರತಿಭಟನಾ ಸ್ಥಳದಲ್ಲಿ ತೂಗು ಹಾಕಿದರು
‘ಆಶಾ’ ವಿರುದ್ಧ ಸಚಿವರ ಆಕ್ರೋಶ
ತಿರುವನಂತಪುರ: ತಲೆ ಕೂದಲನ್ನು ಕತ್ತರಿಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿರುವ ಆಶಾ ಕಾರ್ಯಕರ್ತೆಯರ ವಿರುದ್ಧ ಕಾರ್ಮಿಕ ಸಚಿವ ವಿ. ಶಿವನ್‌ಕುಟ್ಟಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಆಶಾ ಕಾರ್ಯಕರ್ತೆಯರು ತಾವು ಕತ್ತರಿಸಿರುವ ತಲೆ ಕೂದಲನ್ನು ಸಚಿವರ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕೆಂದು ಒತ್ತಾಯಿಸುತ್ತೇನೆ’ ಎಂದು ವ್ಯಂಗ್ಯವಾಡಿದ್ದಾರೆ.
‘ಬಿಜೆಪಿಯ ಸ್ಥಳೀಯ ಪ್ರತಿನಿಧಿಗಳು ಈ ಪ್ರತಿಭಟನೆಯಲ್ಲಿ ಕೈ ಜೋಡಿಸಿದ್ದಾರೆ. ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಕಾರ್ಯಕರ್ತೆಯರ ಗೌರವಧನ ಏರಿಕೆಯನ್ನು ಪರಿಗಣಿಸಿಲ್ಲ ಬದಲಾಗಿ ಅವರಿಗೆ ಕೊಡೆ ಕೋಟುಗಳನ್ನು ವಿತರಿಸಿದ್ದಾರೆ’ ಎಂದರು.
ಕೇಂದ್ರಕ್ಕೆ ಪತ್ರ: ‘ಆಶಾ ಸೇರಿದಂತೆ ಸ್ಕೀಮ್ ಕಾರ್ಮಿಕರಿಗೆ ಕಾರ್ಮಿಕರ ಸ್ಥಾನಮಾನ ನೀಡಬೇಕು ಮತ್ತು ಕೇಂದ್ರ ಕಾರ್ಮಿಕ ಕಾಯ್ದೆಯಡಿ ಸೌಲಭ್ಯಗಳಿಗೆ ಅರ್ಹರನ್ನಾಗಿ ಮಾಡಬೇಕು ಎಂದು ಕೋರಿ ಕೇಂದ್ರ ಕಾರ್ಮಿಕ ಸಚಿವರಿಗೆ ಪತ್ರ ಬರೆದು ಹಲವು ದಿನಗಳಾಗಿವೆ. ಆದರೆ ಇದುವರೆಗೆ ನನಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಅವರು ದೂರಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಅನುಮೋದಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುವಂತೆ ಕೇಂದ್ರ ಸಚಿವರಾದ ಸುರೇಶ್ ಗೋಪಿ ಮತ್ತು ಜಾರ್ಜ್ ಕುರಿಯನ್ ಅವರನ್ನು ಶಿವನ್‌ಕುಟ್ಟಿ ಒತ್ತಾಯಿಸಿದ್ದಾರೆ.
‘ಆಶಾ ಕಾರ್ಯಕರ್ಯತೆಯರು ಕೇರಳದಲ್ಲಿ ಕೇವಲ ₹7 ಸಾವಿರ ಗೌರವಧನ ಪಡೆಯುತ್ತಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ. ದೂರವಾಣಿ ಭತ್ಯೆ ಸೇರಿ ಮಾಸಿಕ ₹13200 ಪಡೆಯುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.