ADVERTISEMENT

ಡ್ರಗ್ಸ್‌ ಜಪ್ತಿ| ಸಾಕ್ಷ್ಯ ತಿರುಚಿದ್ದ ಪ್ರಕರಣ: ಕೇರಳ ಶಾಸಕನಿಗೆ 3 ವರ್ಷ ಜೈಲು

ಪಿಟಿಐ
Published 3 ಜನವರಿ 2026, 14:20 IST
Last Updated 3 ಜನವರಿ 2026, 14:20 IST
   

ತಿರುವನಂತಪುರ: ಡ್ರಗ್ಸ್‌ ಜಪ್ತಿ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ತಿರುಚಿದ್ದಕ್ಕಾಗಿ ಕೇರಳದ ಮಾಜಿ ಸಾರಿಗೆ ಸಚಿವ ಹಾಗೂ ಹಾಲಿ ಶಾಸಕ ಆ್ಯಂಟೊನಿ ರಾಜು ಹಾಗೂ ಕೋರ್ಟ್‌ನ ಮಾಜಿ ಗುಮಾಸ್ತ ಕೆ.ಎಸ್‌.ಜೋಸ್‌ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಶನಿವಾರ ಆದೇಶಿಸಿದೆ.

ಆ್ಯಂಟೊನಿ ರಾಜು, ಆಡಳಿತಾರೂಢ ಎಲ್‌ಡಿಎಫ್‌ ಮೈತ್ರಿಕೂಟದ ಅಂಗಪಕ್ಷವಾದ ಜನಾಧಿಪತ್ಯ ಕೇರಳ ಕಾಂಗ್ರೆಸ್‌ ಶಾಸಕ.

1990ರಲ್ಲಿ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಆಸ್ಟ್ರೇಲಿಯಾ ಪ್ರಜೆಯೊಬ್ಬರಿಂದ 61.5 ಗ್ರಾಂ ಹಶೀಶ್ ಜಪ್ತಿ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ತಿರುಚಿದ್ದ ಆರೋಪದಡಿ ಆ್ಯಂಟೊನಿ ರಾಜು ಮತ್ತು ಜೋಸ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ನೆಡುಮಂಗಾಡ್ ನ್ಯಾಯಾಲಯದ ನ್ಯಾಯಾಧೀಶೆ ರುಬಿ ಇಸ್ಮಾಯಿಲ್, ಇಬ್ಬರು ತಪ್ಪಿತಸ್ಥರೆಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದ್ದಾರೆ.

ADVERTISEMENT

ಈ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಜೈಮೋಹನ್‌ ಅವರು ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದ್ದಾರೆ.

‘ಶಿಕ್ಷೆಯ ಪ್ರಮಾಣಕ್ಕಿಂತ ಅವರನ್ನು ಅಪರಾಧಿಗಳೆಂದು ತೀರ್ಮಾನಿಸಿ ನ್ಯಾಯಾಲಯ ಆದೇಶಿಸಿರುವುದು ನನಗೆ ಮುಖ್ಯ ಎನಿಸಿದೆ. ಸಾಕ್ಷ್ಯಗಳನ್ನು ತಿರುಚಿದವರಿಗೆ ಶಿಕ್ಷೆ ನೀಡಲಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.