ಮಕರಜ್ಯೋತಿ
ಶಬರಿಮಲೆ: ಇಲ್ಲಿನ ಅಯ್ಯಪ್ಪ ದೇಗುಲಕ್ಕೆ ವಿವಿಧ ರಾಜ್ಯಗಳಿಂದ ಬಂದಿದ್ದ ಸಾವಿರಾರು ಭಕ್ತರು ಮಂಗಳವಾರ ಮಕರಜ್ಯೋತಿ ಕಣ್ತುಂಬಿಕೊಂಡರು.
ಇರುಮುಡಿ ಹೊತ್ತಿದ್ದ ಭಕ್ತರು ದೇವಾಲಯದ ಆವರಣ ಮತ್ತು ಇತರೆಡೆಗಳಲ್ಲಿ ಮಕರಜ್ಯೋತಿ ದರ್ಶನಕ್ಕಾಗಿ ಮಧ್ಯಾಹ್ನದಿಂದಲೇ ಕಾದು ನಿಂತಿದ್ದರು. ಸಂಜೆ 6.43ರ ವೇಳೆಗೆ ಪೊನ್ನಂಬಲಮೇಡು ಬೆಟ್ಟದ ಕಾಡಿನೊಳಗಿನಿಂದ ಮಕರಜ್ಯೋತಿ ಕಾಣಿಸಿಕೊಂಡಾಗ ಪುಳಕಿತರಾದರು.
ಪತ್ತನಂತಿಟ್ಟದ ಪಂದಳಂ ಅರಮನೆಯಿಂದ ತರಲಾದ 'ತಿರುವಾಭರಣ'ದಿಂದ (ಪವಿತ್ರ ಆಭರಣಗಳು) ಅಯ್ಯಪ್ಪ ದೇವರ ಮೂರ್ತಿಯನ್ನು ಅಲಂಕರಿಸಲಾಗಿತ್ತು. ಪಂದಳಂ ಅರಮನೆಯು ಅಯ್ಯಪ್ಪ, ತನ್ನ ಬಾಲ್ಯವನ್ನು ಕಳೆದ ಸ್ಥಳ ಎಂದು ನಂಬಲಾಗಿದೆ.
ದೇಗುಲ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ‘ವರ್ಚುವಲ್ ಕ್ಯೂ ಬುಕಿಂಗ್’ ಮತ್ತು ‘ಸ್ಪಾಟ್ ಬುಕಿಂಗ್’ ಸೌಲಭ್ಯಗಳ ಮೂಲಕ ಸುಮಾರು 50 ಸಾವಿರ ಯಾತ್ರಿಕರಿಗೆ ‘ಮಕರವಿಳಕ್ಕು’ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.
ಮಕರವಿಳಕ್ಕು ಉತ್ಸವದೊಂದಿಗೆ ಕೊನೆಗೊಳ್ಳುವ ಎರಡು ತಿಂಗಳ ಯಾತ್ರೆಯಲ್ಲಿ ಸುಮಾರು 40 ಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.