
ತಿರುವನಂತಪುರಂ: ತಮಿಳುನಾಡು ಬೆನ್ನಲ್ಲೇ ಕೇರಳ ಸರ್ಕಾರವೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ವಿರೋಧಿಸಿ ಕಾನೂನು ಹೋರಾಟಕ್ಕೆ ನಿರ್ಧಾರ ಕೈಗೊಂಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ ಬುಧವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಎಸ್‌ಐಆರ್ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವ ನಿರ್ಣಯ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಬಿಜೆಪಿ ಪಾಲ್ಗೊಂಡಿರಲಿಲ್ಲ. ಎಲ್‌ಡಿಎಫ್ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳೂ ಬೆಂಬಲ ವ್ಯಕ್ತಪಡಿಸಿದವು.
ಈಗಾಗಲೇ ತಮಿಳುನಾಡು ಸರ್ಕಾರ ಎಸ್‌ಐಆರ್ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
‘ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪದಲ್ಲಿರುವಾಗಲೇ ಕೇಂದ್ರ ಚುನಾವಣಾ ಆಯೋಗ ಕೇರಳದಲ್ಲಿ ಎಸ್‌ಐಆರ್ ನಡೆಸುತ್ತಿದೆ. ಇದರ ವಿರುದ್ಧ ಕಾನೂನು ಹೋರಾಟಕ್ಕೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುವುದು. 2002ರ ಮತದಾರರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ವಿಶೇಷ ಪರಿಷ್ಕರಣೆ ಮಾಡುವುದು ಗಂಭೀರ ಪರಿಣಾಮವನ್ನು ಉಂಟುಮಾಡುತ್ತದೆ’ ಎಂದು ಪಿಣರಾಯಿ ವಿಜಯನ್ ಸಭೆಗೆ ತಿಳಿಸಿದರು ಎಂದು ಅವರ ಕಚೇರಿ ತಿಳಿಸಿದೆ.
ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಕೇರಳ ವಿಧಾನಮಂಡಲ ಅಧಿವೇಶನದಲ್ಲಿ ಎಸ್‌ಐಆರ್ ವಿರುದ್ಧ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿತ್ತು.
ಮತ್ತೊಂದೆಡೆ ಮಂಗಳವಾರದಿಂದಲೇ ಕೇರಳದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭಗೊಂಡಿದ್ದು, 2.07 ಲಕ್ಷ ನೋಂದಣಿ ಅರ್ಜಿಗಳನ್ನು ವಿತರಿಸಲಾಗಿದೆ.
Cut-off box - ಬಂಗಾಳದಲ್ಲಿ 84 ಲಕ್ಷ ಅರ್ಜಿ ವಿತರಣೆ ಕೋಲ್ಕತ್ತ (ಪಿಟಿಐ): ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ 84 ಲಕ್ಷಕ್ಕೂ ಹೆಚ್ಚು ಸ್ವಯಂ ಘೋಷಣೆ ಅರ್ಜಿಗಳನ್ನು ಪಶ್ಚಿಮ ಬಂಗಾಳ ರಾಜ್ಯದಾದ್ಯಂತ ವಿತರಿಸಲಾಗಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ಆರಂಭಗೊಂಡಿರುವ ಎಸ್‌ಐಆರ್ ಪ್ರಕ್ರಿಯೆ ಡಿಸೆಂಬರ್ 4ರವರೆಗೂ (ಒಂದು ತಿಂಗಳಿಗೂ ಹೆಚ್ಚು ಕಾಲ) ನಡೆಯಲಿದೆ. ಮತಗಟ್ಟೆ ಅಧಿಕಾರಿಗಳು ಬುಧವಾರ ಸಂಜೆ 4 ಗಂಟೆವರೆಗೆ 84 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ವಿತರಿಸಿದ್ದಾರೆ. ಈವರೆಗೆ 7.66 ಕೋಟಿ ಸ್ವಯಂ ಘೋಷಣೆ ನಮೂನೆಗಳನ್ನು ಸಿದ್ಧಗೊಳಿಸಲಾಗಿದೆ. ಮಂಗಳವಾರ ಯಾವುದೇ ಭಾಗದಲ್ಲಿ ಅಡ್ಡಿಪಡಿಸುವ ಘಟನೆಗಳು ನಡೆದಿಲ್ಲ ಎಂದು ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೇಂದ್ರ ತಂಡ ಪರಿಶೀಲನೆ: ಈ ಮಧ್ಯೆ ಎಸ್‌ಐಆರ್ ಪ್ರಕ್ರಿಯೆ ಪರಿಶೀಲಿಸಲು ಕೇಂದ್ರ ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಜೋಷಿ ಉಪ ಕಾರ್ಯದರ್ಶಿ ಅಭಿನವ್ ಅಗರ್ವಾಲ್ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದಾರೆ. ಕೂಚ್ ಬಿಹಾರ್ ಆಲಿಪುರ್‌ದ್ವಾರ್ ಮತ್ತು ಜಲಪಾಯಿಗುಡಿ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಗರುವಾರ ಮತಗಟ್ಟೆ ಅಧಿಕಾರಿಗಳು ಚುನಾವಣೆ ಅಧಿಕಾರಿಗಳ ಕಾರ್ಯ ಪರಿಶೀಲನೆ ನಡೆಸಲಿದ್ದು ರಾಜಕೀಯ ಮುಖಂಡರು ಮುಖ್ಯ ಚುನಾವಣಾಧಿಕಾರಿ ಕಚೇರಿಯ ಪ್ರತಿನಿಧಿಗಳ ಜೊತೆ ಸಂವಾದ ನಡೆಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.