ಕೆ.ವಿ. ರಬಿಯಾ, ಎಕ್ಸ್ ಖಾತೆಯ ಚಿತ್ರ
ಮಲಪ್ಪುರಂ(ಕೇರಳ): ಕೇರಳ ರಾಜ್ಯದ ಸಾಕ್ಷರತಾ ಅಭಿಯಾನದಲ್ಲಿ ಸಕ್ರಿಯ ಪಾತ್ರ ವಹಿಸುವ ಮೂಲಕ ಹೆಸರಾಗಿದ್ದ ಮಲಪ್ಪುರಂ ಜಿಲ್ಲೆಯ ವಿಕಲಚೇತನ ಸಾಮಾಜಿಕ ಕಾರ್ಯಕರ್ತೆ ಕೆ.ವಿ. ರಬಿಯಾ ಅವರು ಅನಾರೋಗ್ಯದಿಂದ ಭಾನುವಾರ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಮೂಲಗಳು ತಿಳಿಸಿವೆ.
ಅವರಿಗೆ 59 ವರ್ಷ ವಯಸ್ಸಾಗಿತ್ತು. 2022ರಲ್ಲಿ ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳಿಗಾಗಿ ರಬಿಯಾ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.
14ನೇ ವಯಸ್ಸಿನಲ್ಲಿ ಪೋಲಿಯೊದಿಂದ ಅಂಗವಿಕಲರಾದ ರಬಿಯಾ, ಗಾಲಿಕುರ್ಚಿಯಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸಿದ್ದರು.
1992ರ ಜೂನ್ ತಿಂಗಳಲ್ಲಿ ಮಲಪ್ಪುರಂ ಜಿಲ್ಲೆಯ ವೆಲ್ಲಿಲಕ್ಕಾಡ್ ಎಂಬ ತನ್ನ ಹುಟ್ಟೂರು ಬಳಿಯ ತಿರುರಂಗಡಿಯಲ್ಲಿ ಎಲ್ಲ ವಯಸ್ಸಿನ ಅನಕ್ಷರಸ್ಥರಿಗೆ ವಯಸ್ಕ ಸಾಕ್ಷರತಾ ಅಭಿಯಾನವನ್ನು ಪ್ರಾರಂಭಿಸಿದರು. ತಮ್ಮ ಕೆಲಸದ ಮೂಲಕ ಅವರು ನೂರಾರು ಅನಕ್ಷರಸ್ಥರು ಅಕ್ಷರಸ್ಥರಾಗಲು ನೆರವಾದರು.
ಶಿಕ್ಷಣ, ಆರೋಗ್ಯ, ಅಂಗವಿಕಲರ ಪುನಶ್ಚೇತನಕ್ಕಾಗಿ ‘ಚಲನಂ’ ಎಂಬ ಸ್ವಯಂಸೇವಾ ಸಂಸ್ಥೆ ಸ್ಥಾಪಿಸಿದ್ದರು.
2002ರಲ್ಲಿ ಕ್ಯಾನ್ಸರ್ ಮಹಾಮಾರಿಯಿಂದ ತತ್ತರಿಸಿದರೂ ಯಶಸ್ವಿಯಾಗಿ ಕಿಮೋಥೆರಫಿ ಪಡೆದು ಸಾಮಾಜಿಕ ಸೇವೆಗೆ ಮರಳಿದ್ದರು. 2009ರಲ್ಲಿ ‘ಸ್ವಪ್ನಂಗಳ್ಕು ಚಿರಕುಕಲ್ ಉಂಡು’ ಎಂಬ ಆತ್ಮಚರಿತ್ರೆ ಬರೆದಿದ್ದಾರೆ.
1994ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ನ್ಯಾಶನಲ್ ಯೂತ್ ಅವಾರ್ಡ್ ಪಡೆದಿದ್ದರು.
2002ರಲ್ಲಿ 73ನೇ ಗಣರಾಜ್ಯೋತ್ಸವದ ಸಂಬರ್ಭ ಪದ್ಮಶ್ರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಾಜ್ಯ ಪ್ರಶಸ್ತಿ ಸೇರಿ ಸಾಮಾಜಿಕ ಸೇವೆಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.