ADVERTISEMENT

ದೆಹಲಿಯ ಜಹಾಂಗಿರ್‌ಪುರಿ ಹಿಂಸಾಚಾರ: ಪ್ರಮುಖ ಆರೋಪಿ ಪಶ್ಚಿಮ ಬಂಗಾಳದಲ್ಲಿ ಬಂಧನ

ಪಿಟಿಐ
Published 28 ಏಪ್ರಿಲ್ 2022, 12:35 IST
Last Updated 28 ಏಪ್ರಿಲ್ 2022, 12:35 IST
ಜಹಾಂಗಿರ್‌ಪುರಿಯಲ್ಲಿ ಭದ್ರತೆ: ಪಿಟಿಐ ಸಂಗ್ರಹ ಚಿತ್ರ
ಜಹಾಂಗಿರ್‌ಪುರಿಯಲ್ಲಿ ಭದ್ರತೆ: ಪಿಟಿಐ ಸಂಗ್ರಹ ಚಿತ್ರ   

ಕೋಲ್ಕತ್ತ: ದೆಹಲಿಯ ಜಹಾಂಗಿರ್‌ಪುರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ದೆಹಲಿಯ ಅಪರಾಧ ದಳದ ಪೊಲೀಸರು ಗುರುವಾರ ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರೋಪಿಯನ್ನು ಫರೀದ್ ಅಲಿಯಾಸ್ ನೀತು ಎಂದು ಗುರುತಿಸಲಾಗಿರುವುದಾಗಿ ಅವರು ತಿಳಿಸಿದ್ದಾರೆ.

‘ಈತ ಕೋಮುಗಲಭೆಯಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮತ್ತು ಪ್ರಮುಖ ಪಾತ್ರ ವಹಿಸಿದ್ದ. ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾಗಿರುವ ನಮ್ಮ ತಂಡವು ಗುರುವಾರ ತಮ್ಲುಕ್ ಹಳ್ಳಿಯಲ್ಲಿರುವ ಆರೋಪಿಯ ಚಿಕ್ಕಮ್ಮನ ಮನೆಯಿಂದ ಆತನನ್ನು ಬಂಧಿಸಿದೆ. ವಿಮಾನದ ಮೂಲಕ ನವದೆಹಲಿಗೆ ಕರೆತರಲಾಗುತ್ತಿದೆ’ಎಂದು ಮೂಲವೊಂದು ಹೇಳಿದೆ.

ADVERTISEMENT

ಗಲಾಟೆ ಬಳಿಕ ಆರೋಪಿಗಳು ದೆಹಲಿಯಿಂದ ಪರಾರಿಯಾಗಿದ್ದರು. ಅಂದಿನಿಂದ, ಅವರು ತಮ್ಮ ಸ್ಥಳಗಳನ್ನು ಬದಲಾಯಿಸುತ್ತಿದ್ದರು ಮತ್ತು ಪಶ್ಚಿಮ ಬಂಗಾಳದಾದ್ಯಂತ ಓಡಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಬಂಧಿತ ಆರೋಪಿ ವಿರುದ್ಧ 2010 ರಿಂದ ದರೋಡೆ, ಕಳ್ಳತನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಆರು ಪ್ರಕರಣಗಳು ದಾಖಲಾಗಿವೆ. ಈತ ಜಹಾಂಗೀರ್‌ಪುರಿ ಪ್ರದೇಶದ ರೌಡಿ ಶೀಟರ್ ಎಂದೂ ಅವರು ಹೇಳಿದ್ದಾರೆ.

ಏಪ್ರಿಲ್ 16 ರಂದು ರಾಷ್ಟ್ರ ರಾಜಧಾನಿಯ ಜಹಾಂಗಿರ್‌ಪುರಿಯಲ್ಲಿ ಹನುಮಾನ್ ಜಯಂತಿ ಮೆರವಣಿಗೆಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿತ್ತು. ಘರ್ಷಣೆಯಲ್ಲಿ ಎಂಟು ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ಗಾಯಗೊಂಡಿದ್ದರು. ಪೊಲೀಸರ ಪ್ರಕಾರ, ಘರ್ಷಣೆಯ ಸಮಯದಲ್ಲಿ ಕಲ್ಲು ತೂರಾಟ ನಡೆದಿದ್ದು, ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.

ಹಿಂಸಾಚಾರ ನಡೆದು ಕೆಲ ದಿನಗಳ ನಂತರ, ಪ್ರಕರಣದ ಪ್ರಮುಖ ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪಗಳ ಅಡಿ ತನಿಖೆ ಮಾಡಲು ಜಾರಿ ನಿರ್ದೇಶನಾಲಯಕ್ಕೆ ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ಅವರು ಪತ್ರ ಬರೆದಿದ್ದರು.

ಪ್ರಕರಣದ ಐವರೂ ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.