ನವದೆಹಲಿ: ‘ಪಂಜಾಬ್‌ನೊಳಗೆ ಖಾಲಿಸ್ತಾನ ಎಂಬ ಸ್ವತಂತ್ರ ರಾಷ್ಟ್ರ ಸ್ಥಾಪಿಸಲು ಖಾಲಿಸ್ತಾನಿ ಉಗ್ರರು 1980ರ ದಶಕದ ಮಧ್ಯಭಾಗದಿಂದಲೂ ಪ್ರಯತ್ನಿಸುತ್ತಿದ್ದಾರೆ’ ಎಂದು ಕೆನಡಾದ ಗುಪ್ತಚರ ಸಂಸ್ಥೆಯ ವರದಿ ತಿಳಿಸಿದೆ.
ಖಾಲಿಸ್ತಾನಿ ಉಗ್ರಗಾಮಿಗಳ ಒಂದು ಸಣ್ಣ ಗುಂಪು ದೇಣಿಗೆ ಸಂಗ್ರಹ ಮತ್ತು ಭಾರತದಲ್ಲಿ ಹಿಂಸಾ ಕೃತ್ಯಕ್ಕೆ ಯೋಜನೆ ರೂಪಿಸಲು ಕೆನಡಾವನ್ನು ನೆಲೆಯಾಗಿ ಬಳಸುವುದನ್ನು ಮುಂದುವರಿಸಿದೆ ಎಂದು ‘ದಿ ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸಸ್’ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ.
ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಮಾತುಕತೆ ನಡೆಸಿರುವ ಬೆನ್ನಲ್ಲೇ ಈ ವರದಿ ಬಿಡುಗಡೆಯಾಗಿದೆ.
ಕೆನಡಾದಲ್ಲಿ ನೆಲಸಿರುವ ಖಾಲಿಸ್ತಾನಿ ಉಗ್ರರು ನಿರಂತರವಾಗಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಕೆನಡಾ ಮತ್ತು ಕೆನಡಾದ ಪ್ರಜೆಗಳ ಹಿತಾಸಕ್ತಿಗಳಿಗೆ ಬೆದರಿಕೆಯಾಗಿ ಪರಿಣಮಿಸಿದೆ ಎಂದು ವರದಿ ಹೇಳಿದೆ. ‘ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಹಸ್ತಕ್ಷೇಪ’ವನ್ನು ವರದಿಯಲ್ಲಿ ಟೀಕಿಸಲಾಗಿದೆ.
‘ನಿರ್ದಿಷ್ಟವಾಗಿ ಹೇಳುವುದಾದರೆ, ಖಾಲಿಸ್ತಾನಿ ಉಗ್ರರ ಚಟುವಟಿಕೆಗಳು ಕೆನಡಾದಲ್ಲಿ ಭಾರತದ ಹಸ್ತಕ್ಷೇಪಕ್ಕೆ ಹಾದಿಯೊದಗಿಸುತ್ತಿದೆ. ಭಾರತದ ಅಧಿಕಾರಿಗಳು ಮತ್ತು ಕೆನಡಾದಲ್ಲಿರುವ ಅವರ ಏಜೆಂಟ್‌ಗಳು ಕೆನಡಾದ ಸಮುದಾಯಗಳು ಹಾಗೂ ರಾಜಕಾರಣಿಗಳ ಮೇಲೆ ಪ್ರಭಾವ ಬೀರುವ ಹಲವು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ’ ಎಂದು ಆರೋಪಿಸಿದೆ.
‘ಇಂತಹ ಚಟುವಟಿಕೆಗಳು ಮೋಸಗೊಳಿಸುವ ರೀತಿಯಲ್ಲಿ, ರಹಸ್ಯವಾಗಿ ಅಥವಾ ಬೆದರಿಕೆಯೊಡ್ಡುವಂತಿದ್ದರೆ, ಅವುಗಳನ್ನು ವಿದೇಶಿ ಹಸ್ತಕ್ಷೇಪವೆಂದು ಪರಿಗಣಿಸಲಾಗುತ್ತದೆ’ ಎಂದು ತಿಳಿಸಿದೆ.
ಖಾಲಿಸ್ತಾನಿ ಪರ ಪ್ರತ್ಯೇಕತಾವಾದಿಗಳು ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ನಿರ್ಭೀತಿಯಿಂದ ನಡೆಸುತ್ತಿದ್ದಾರೆ ಎಂಬ ಭಾರತದ ಆರೋಪವನ್ನು ವರದಿಯು ಸಮರ್ಥಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.