ADVERTISEMENT

ಕೇಂದ್ರದಿಂದ ರೈತರ ದನಿ ಹತ್ತಿಕ್ಕುವ ಯತ್ನ: ಖರ್ಗೆ

ಪಿಟಿಐ
Published 13 ಫೆಬ್ರುವರಿ 2024, 11:37 IST
Last Updated 13 ಫೆಬ್ರುವರಿ 2024, 11:37 IST
ಮಲ್ಲಿಕಾರ್ಜುನ ಖರ್ಗೆ 
ಮಲ್ಲಿಕಾರ್ಜುನ ಖರ್ಗೆ    

ನವದೆಹಲಿ: ‘ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈಗ ರೈತರ ದನಿಯನ್ನು ದಮನ ಮಾಡುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಟೀಕಿಸಿದ್ದಾರೆ.

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ‘ದೆಹಲಿ ಚಲೋ’ ಹಮ್ಮಿಕೊಂಡಿರುವ ರೈತರು, ರಾಷ್ಟ್ರ ರಾಜಧಾನಿ ಪ್ರವೇಶಿಸದಂತೆ ವ್ಯಾಪಕ ಬಂದೋಬಸ್ತ್ ಮಾಡಿರುವ ಸರ್ಕಾರದ ನಡೆ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.

‘ಮುಳ್ಳು ತಂತಿಗಳ ಬೇಲಿ ಅಳವಡಿಕೆ, ಡ್ರೋನ್‌ಗಳಿಂದ ಅಶ್ರುವಾಯು ಶೆಲ್‌ ಸಿಡಿಸುವುದು ಸೇರಿದಂತೆ ರೈತರು ದೆಹಲಿ ಪ್ರವೇಶಿಸದಂತೆ ತಡೆಯುವುದಕ್ಕಾಗಿ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಸರ್ವಾಧಿಕಾರ ಧೋರಣೆಯ ಈ ಸರ್ಕಾರ ರೈತರ ದನಿ ಹತ್ತಿಕ್ಕುತ್ತಿದೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

‘ಈ ಹಿಂದೆಯೂ ರೈತರು ಪ್ರತಿಭಟನೆ ನಡೆಸಿದ್ದರು. ಆಗ, ‘ಆಂದೋಲನ ಜೀವಿ’ ಹಾಗೂ ‘ಪರಾವಲಂಬಿ’ಗಳು ಎಂಬುದಾಗಿ ಕರೆಯುವ ಮೂಲಕ ಅವರನ್ನು ಅವಮಾನಿಸಲಾಗಿತ್ತು . ಪ್ರತಿಭಟನೆ ವೇಳೆ 750 ರೈತರು  ಪ್ರಾಣ ಕಳೆದುಕೊಂಡಿದ್ದರು’ ಎಂದು ಅವರು ಹಿಂದಿಯಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕಾಂಗ್ರೆಸ್‌ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ ಎಂದಿರುವ ಅವರು, ‘ನಾವು ಹೆದರುವುದಿಲ್ಲ; ನಾವು ಬಗ್ಗುವುದಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.