ಮೋಹನ್ ಭಾಗವತ್, ರಾಹುಲ್ ಗಾಂಧಿ
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ‘ನಿಜವಾದ ಸ್ವಾತಂತ್ರ್ಯ’ ಹೇಳಿಕೆಯು ವಿವಾದದ ಕಿಡಿ ಹೊತ್ತಿಸಿದೆ. ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸುವಾಗ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಡಿರುವ ‘ಸರ್ಕಾರಿ ವ್ಯವಸ್ಥೆ ವಿರುದ್ಧದ ಹೋರಾಟ’ದ ಮಾತು ಕೂಡಾ ವಿವಾದ ಸೃಷ್ಟಿಸಿದ್ದು, ಕಾಂಗ್ರೆಸ್–ಬಿಜೆಪಿ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ನವದೆಹಲಿ: ‘ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ದಿನ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿರುವುದು ವಿವಾದದ ಕಿಡಿ ಹೊತ್ತಿಸಿದೆ. ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಭಾಗವತ್ ಹೇಳಿಕೆಯನ್ನು ತೀಕ್ಷ್ಣ ಮಾತುಗಳಿಂದ ಖಂಡಿಸಿದ್ದಾರೆ.
‘ಭಾಗವತ್ ದೇಶದ್ರೋಹ ಎಸಗಿದ್ದಾರೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಇಲ್ಲಿನ ಕೋಟ್ಲಾ ರಸ್ತೆಯಲ್ಲಿ ಬುಧವಾರ ಕಾಂಗ್ರೆಸ್‌ನ ನೂತನ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಹುಲ್, ‘ಮೋಹನ್ ಭಾಗವತ್ ಅವರು ಸ್ವಾತಂತ್ರ್ಯ ಚಳವಳಿ ಮತ್ತು ಸಂವಿಧಾನದ ಬಗ್ಗೆ ಈ ರೀತಿಯ ಅಭಿಪ್ರಾಯವನ್ನು ದೇಶಕ್ಕೆ ತಿಳಿಸುವ ದಾರ್ಷ್ಟ್ಯ ತೋರಿದ್ದಾರೆ. ವಾಸ್ತವವಾಗಿ, ಅವರ ಹೇಳಿಕೆ ದೇಶದ್ರೋಹದ ಕೃತ್ಯಕ್ಕೆ ಸಮನಾಗಿದೆ. ಏಕೆಂದರೆ, ಅವರು ಸಂವಿಧಾನವನ್ನು ಅಸಿಂಧು ಎಂದು ಹೇಳುತ್ತಿದ್ದಾರೆ. ಬ್ರಿಟಿಷರ ವಿರುದ್ಧ ನಡೆದ ಹೋರಾಟವನ್ನೂ ಅಸಮರ್ಥನೀಯ ಎನ್ನುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಭಾರತವು 1947ರಲ್ಲಿ ನಿಜವಾದ ಸ್ವಾತಂತ್ರ್ಯ ಗಳಿಸಲಿಲ್ಲ ಎಂಬ ಹೇಳಿಕೆಯು ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ದೇಶದ ಪ್ರತಿಯೊಬ್ಬ ಪ್ರಜೆ ಮತ್ತು ಸಂವಿಧಾನಕ್ಕೆ ಮಾಡಿರುವ ಅವಮಾನ. ಇಂತಹ ಅಸಂಬದ್ಧ ಮಾತುಗಳನ್ನು ಕಡೆಗಣಿಸುವ ಸಮಯ ಬಂದಿದೆ’ ಎಂದಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ರಾಮಮಂದಿರ ಉದ್ಘಾಟನೆಯಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತೆಂದು ಆರ್‌ಎಸ್‌ಎಸ್‌ನವರು ನಂಬಿದ್ದಾರೆ. 1947ರಲ್ಲೇ ಸ್ವಾತಂತ್ರ್ಯ ಸಿಕ್ಕಿದರೂ ಅದನ್ನು ಒಪ್ಪಿಕೊಳ್ಳದಿರುವುದು ನಾಚಿಕೆಗೇಡು’ ಎಂದು ಕಿಡಿಕಾರಿದ್ದಾರೆ.
‘ಆರ್‌ಎಸ್‌ಎಸ್‌ನವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ, ಜೈಲಿಗೂ ಹೋಗಿಲ್ಲ. ಆದ್ದರಿಂದ 1947ರಲ್ಲೇ ಸ್ವಾತಂತ್ರ್ಯ ಲಭಿಸಿರುವುದು ಅವರಿಗೆ ನೆನಪಿಲ್ಲ. ಆದರೆ ನಮ್ಮವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತೆತ್ತಿರುವುದರಿಂದ ನಮಗೆ ಅದರ ನೆನಪಿದೆ’ ಎಂದಿದ್ದಾರೆ.
‘ಸ್ವಾತಂತ್ರ್ಯದೊಂದಿಗೆ ಯಾವುದೇ ಸಂಬಂಧವಿಲ್ಲದ ಮತ್ತು ಅದಕ್ಕಾಗಿ ಹೋರಾಡದ ಜನರು ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ನಿಮಗೆ ತಿಳಿದಿದೆ. ಆರ್‌ಎಸ್‌ಎಸ್ ಮುಖ್ಯಸ್ಥರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಅವರು ಪ್ರಧಾನಿ ನರೇಂದ್ರ ಮೋದಿ ಜತೆ ಸೇರಿಕೊಂಡು ರಾಮಮಂದಿರ ಉದ್ಘಾಟಿಸಿದ್ದರು. 2014ರಲ್ಲಿ ತಾನು ಪ್ರಧಾನಿಯಾದಾಗ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂಬುದು ಮೋದಿ ಅವರ ನಂಬಿಕೆಯಾಗಿದೆ’ ಎಂದು ಲೇವಡಿ ಮಾಡಿದರು.
ಭಾಗವತ್ ಹೇಳಿದ್ದು ಏನು?
ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ದಿನವನ್ನು ‘ಪ್ರತಿಷ್ಠಾ ದ್ವಾದಶಿ’ಯಾಗಿ ಆಚರಿಸಬೇಕು. ಏಕೆಂದರೆ ಹಲವಾರು ಶತಮಾನಗಳಿಂದ ಶತ್ರುಗಳ ದಾಳಿ ಎದುರಿಸಿದ ಭಾರತಕ್ಕೆ ಬಾಲರಾಮನ ಪ್ರತಿಷ್ಠಾಪನೆಯ ದಿನ ‘ನಿಜವಾದ ಸಾತಂತ್ರ್ಯ’ ಲಭಿಸಿತು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಇಂದೋರ್‌ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ‘ರಾಷ್ಟ್ರೀಯ ದೇವಿ ಅಹಿಲ್ಯಾ ಪ್ರಶಸ್ತಿ’ ಪ್ರದಾನ ಮಾಡಿ ಅವರು ಈ ಮಾತುಗಳನ್ನಾಡಿದ್ದಾರೆ.
ಇಂತಹ ಹೇಳಿಕೆ ನೀಡುವುದನ್ನು ಮುಂದುವರಿಸಿದರೆ ಭಾಗವತ್ ಅವರಿಗೆ ದೇಶದಲ್ಲಿ ಅತ್ತಿತ್ತ ಓಡಾಡುವುದೂ ಕಷ್ಟವಾಗಲಿದೆಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಒಂದು ವೇಳೆ ಭಾಗವತ್ ಬೇರೆ ಯಾವುದೇ ದೇಶದಲ್ಲಿರುತ್ತಿದ್ದರೆ, ಇಷ್ಟೊತ್ತಿಗೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿತ್ತುರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪಕ್ಷವು ‘ಬಿಜೆಪಿ, ಆರ್‌ಎಸ್‌ಎಸ್ ಮತ್ತು ಇಡೀ ಸರ್ಕಾರಿ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದೆ’ ಎಂದು ಬುಧವಾರ ಹೇಳಿಕೆ ನೀಡಿದ್ದು ವಾಕ್ಸಮರಕ್ಕೆ ಕಾರಣವಾಗಿದೆ.
‘ರಾಹುಲ್ ಮಾಡುವ ಪ್ರತಿಯೊಂದು ಕೆಲಸ ಮತ್ತು ಆಡುವ ಮಾತುಗಳು ದೇಶ ಹಾಗೂ ಸಮಾಜದಲ್ಲಿ ಒಡಕು ಉಂಟುಮಾಡುವ ಉದ್ದೇಶವನ್ನು ಹೊಂದಿರುತ್ತದೆ’ ಎಂದು ಬಿಜೆಪಿ ತಿರುಗೇಟು ನೀಡಿದೆ.
‘ನಾವು ನ್ಯಾಯಯುತ ಹೋರಾಟ ನಡೆಸುತ್ತಿದ್ದೇವೆ ಎಂದು ಭಾವಿಸಬೇಡಿ. ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಆರ್‌ಎಸ್‌ಎಸ್ ಎಂಬ ಎರಡು ರಾಜಕೀಯ ಸಂಘಟನೆಗಳ ವಿರುದ್ಧ ಹೋರಾಡುತ್ತಿದೆ ಎಂದು ನೀವು ನಂಬಿದರೆ, ಇಲ್ಲಿ ಏನು ನಡೆಯುತ್ತಿದೆ ಎಂಬುದೇ ನಿಮಗೆ ಅರ್ಥವಾಗದು. ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಮ್ಮ ದೇಶದ ಪ್ರತಿಯೊಂದು ಸಂಸ್ಥೆಯನ್ನೂ ತಮ್ಮ ವಶಕ್ಕೆ ತೆಗೆದುಕೊಂಡಿವೆ. ಆದ್ದರಿಂದ ನಾವು ಈಗ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಸರ್ಕಾರಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ’ ಎಂದು ರಾಹುಲ್ ಹೇಳಿದ್ದಾರೆ.
‘ಕಾಂಗ್ರೆಸ್ ಸಿದ್ಧಾಂತವನ್ನು ಬೆಂಬಲಿಸುವವರು ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುತ್ತಾರೆ. ಆದರೆ, ಈಗ ಅಧಿಕಾರದಲ್ಲಿರುವ ಮಂದಿ ರಾಷ್ಟ್ರಧ್ವಜಕ್ಕೆ ವಂದಿಸುವುದಿಲ್ಲ ಮತ್ತು ಸಂವಿಧಾನವನ್ನು ನಂಬುವುದಿಲ್ಲ’ ಎಂದು ದೂರಿದರು.
‘ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಭಾರತದ ಬಗ್ಗೆ ‘ಸಂಪೂರ್ಣವಾಗಿ ಭಿನ್ನ ದೃಷ್ಟಿಕೋನ’ ಹೊಂದಿದ್ದಾರೆ. ಗುಪ್ತ ಕಾರ್ಯಸೂಚಿ ಮೂಲಕ ಮತ್ತು ಒಬ್ಬನೇ ವ್ಯಕ್ತಿಯಿಂದ ದೇಶದ ಆಡಳಿತ ನಡೆಸಲು ಬಯಸುತ್ತಾರೆ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಜಾತಿಗಳು ಮತ್ತು ಬುಡಕಟ್ಟು ಸಮುದಾಯದವರ ಧ್ವನಿ ಹತ್ತಿಕ್ಕುವುದೇ ಅವರ ಕಾರ್ಯಸೂಚಿ’ ಎಂದು ಆರೋಪಿಸಿದರು.
ನಡ್ಡಾ ತಿರುಗೇಟು: ರಾಹುಲ್ ಮತ್ತು ಅವರ ಪಕ್ಷಕ್ಕೆ ನಗರ ನಕ್ಸಲರು, ಸರ್ಕಾರವನ್ನು ಅಸ್ಥಿರಗೊಳಿಸುವ ಮಂದಿ ಮತ್ತು ದೇಶದ ಗೌರವಕ್ಕೆ ಧಕ್ಕೆ ಉಂಟುಮಾಡಲು ಹವಣಿಸುವ ಶಕ್ತಿಗಳ ಜತೆ ನಂಟು ಇರುವುದು ರಹಸ್ಯವಾಗಿ ಉಳಿದಿಲ್ಲ. ಅವರು ಮಾಡುತ್ತಿರುವ ಕೆಲಸಗಳು ಇಂತಹ ನಂಬಿಕೆಯನ್ನು ಬಲಪಡಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ‘ಎಕ್ಸ್’ನಲ್ಲಿ ತಿರುಗೇಟು ನೀಡಿದ್ದಾರೆ.
‘ಕಾಂಗ್ರೆಸ್‌ನ ಕೊಳಕು ಸಿದ್ಧಾಂತವು ಈಗ ಆ ಪಕ್ಷದ ನಾಯಕರಿಂದಲೇ ಬಹಿರಂಗಗೊಂಡಿದೆ. ತಮ್ಮ ಪಕ್ಷವು ದೇಶದ ವಿರುದ್ಧ ಹೋರಾಡುತ್ತಿದೆ ಎಂಬ ಸತ್ಯವನ್ನು ತಿಳಿಸಿರುವುದುಕ್ಕೆ ರಾಹುಲ್ ಅವರನ್ನು ಅಭಿನಂದಿಸುತ್ತೇನೆ’ ಎಂದಿದ್ದಾರೆ.
ಸರ್ಕಾರಿ ವ್ಯವಸ್ಥೆ ವಿರುದ್ಧ ಹೋರಾಡುತ್ತಿದ್ದೇವೆ ಎನ್ನುವ ನೀವು ಸಂವಿಧಾನದ ಪ್ರತಿ ಕೈಯಲ್ಲಿ ಹಿಡಿದಿರುವುದು ಏಕೆ?ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ
ರಾಹುಲ್ ಹೇಳಿಕೆ ಕಾಂಗ್ರೆಸ್‌ನ ‘ಕರಾಳ ಸತ್ಯ’ವನ್ನು ಬಿಚ್ಚಿಟ್ಟಿದೆ. ದೇಶದ ಜನರು ಅವರ ಕೆಟ್ಟ ಸಿದ್ಧಾಂತವನ್ನು ತಿರಸ್ಕರಿಸುವರುಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.