ADVERTISEMENT

ಸ್ವಾತಂತ್ರ್ಯ ಕುರಿತು ಮೋಹನ್ ಭಾಗವತ್ ಹೇಳಿಕೆ: ಮಲ್ಲಿಕಾರ್ಜುನ ಖರ್ಗೆ ಕಿಡಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2025, 7:28 IST
Last Updated 15 ಜನವರಿ 2025, 7:28 IST
ಮಲ್ಲಿಕಾರ್ಜುನ ಖರ್ಗೆ–ಪಿಟಿಐ ಚಿತ್ರ
ಮಲ್ಲಿಕಾರ್ಜುನ ಖರ್ಗೆ–ಪಿಟಿಐ ಚಿತ್ರ   

ನವದೆಹಲಿ: ‘ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆಗೊಂಡ ದಿನ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು’ ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಪ್ರತಿಕ್ರಿಯಿಸಿದ್ದಾರೆ.

ಈ ಸಂಬಂಧ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ' ಭಾಗವತ್ ಈ ರೀತಿಯ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದರೆ ದೇಶದಲ್ಲಿ ತಿರುಗಾಡುವುದೂ ಕಷ್ಟವಾಗಬಹುದು' ಎಂದು ಖರ್ಗೆ ಕಿಡಿಕಾರಿದ್ದಾರೆ.

ರಾಮಮಂದಿರ ಪ್ರತಿಷ್ಠಾಪನೆಗೊಂಡ ದಿನವೇ ಭಾರತಕ್ಕೆ ಸ್ವಾತಂತ್ರ್ಯ ದೊರೆಕಿತ್ತು ಎಂಬುವುದಾದರೆ 1947ರ ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿದ ಇತಿಹಾಸ ನೆನಪಿಲ್ಲವೇ, ಸ್ವಾತಂತ್ರ್ಯಕ್ಕಾಗಿ ಆರ್‌ಎಸ್‌ಎಸ್‌ ಹೋರಾಟ ನಡೆಸಿಲ್ಲವೇ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

1947ರ ಸ್ವಾತಂತ್ರ್ಯಕ್ಕಾಗಿ ನೂರಾರು ವರ್ಷಗಳ ಕಾಲ ನಡೆದ ಹೋರಾಟ, ಹೋರಾಟಗಾರರ ಪ್ರಾಣ ತ್ಯಾಗ ಯಾವುದು ನೆನಪಿಲ್ಲವೇ? ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಭಾಗಿಯಾಗದೇ ಇರುವವರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತ್ತು ಎಂಬ ವಿಚಾರವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಭಾಗವತ್ ಇಂತಹ ಹೇಳಿಕೆಗಳನ್ನು ನೀಡುವುದನ್ನು ಮುಂದುರಿಸಿದರೆ ಈ ದೇಶದಲ್ಲಿ ಅವರು ತಿರುಗುವುದೂ ಕಷ್ಟವಾಗುತ್ತದೆ' ಎಂದು ಖರ್ಗೆ ಹೇಳಿದ್ದಾರೆ.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಉಲ್ಲೇಖಿಸಿ ಮಾತನಾಡಿದ ಖರ್ಗೆ, ಇತಿಹಾಸ ಮರೆತವರು ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.