ADVERTISEMENT

ಲೋಕಸಭಾ ಚುನಾವಣೆ: ಆಂಧ್ರಪ್ರದೇಶ ಕಾಂಗ್ರೆಸ್ ಮುಖಂಡರೊಂದಿಗೆ ಖರ್ಗೆ, ರಾಹುಲ್‌ ಸಭೆ

ಪಿಟಿಐ
Published 27 ಡಿಸೆಂಬರ್ 2023, 9:39 IST
Last Updated 27 ಡಿಸೆಂಬರ್ 2023, 9:39 IST
ಮಲ್ಲಿಕಾರ್ಜುನ ಖರ್ಗೆ 
ಮಲ್ಲಿಕಾರ್ಜುನ ಖರ್ಗೆ    

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿನ ಪಕ್ಷದ ಸ್ಥಿತಿಗತಿ ಕುರಿತು ತಿಳಿದುಕೊಳ್ಳಲು ಆಂಧ್ರಪ್ರದೇಶದ ಕಾಂಗ್ರೆಸ್‌ ಮುಖಂಡರೊಂದಿಗೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಇಂದು ಚರ್ಚೆ ನಡೆಸಿದ್ದಾರೆ.

ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸುತ್ತಿರುವ ಕಾಂಗ್ರೆಸ್‌, ಪಕ್ಷದ ರಾಜ್ಯ ಘಟಕದ ಮುಖಂಡರೊಂದಿಗೆ ಸರಣಿ ಸಭೆಗಳನ್ನು ನಡೆಸಲು ನಿರ್ಧರಿಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಖರ್ಗೆ, ‘ಚುನಾವಣಾ ಕಾರ್ಯಸೂಚಿ, ತಂತ್ರಗಾರಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಪಕ್ಷ ಬಲವರ್ಧನೆ ಮಾಡುವ ಕುರಿತಂತೆ ರಾಜ್ಯ ನಾಯಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ’ ಎಂದರು.

ADVERTISEMENT

‘ಕರ್ನಾಟಕ ಮತ್ತು ತೆಲಂಗಾಣ ಚುನಾವಣೆಯಲ್ಲಿ ಪಕ್ಷದ ಗೆಲುವು ಆಂಧ್ರಪ್ರದೇಶದ ರಾಜಕಾರಣದ ಮೇಲೂ ಪರಿಣಾಮ ಬೀರಿದೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಆಂಧ್ರಪ್ರದೇಶದ ಜನರು ಹಿಂದೊಮ್ಮೆ ಕಾಂಗ್ರೆಸ್ ಪಕ್ಷದೊಂದಿಗೆ ಹಂಚಿಕೊಂಡಿದ್ದ ಬಾಂಧವ್ಯವನ್ನು ಮರು ಸ್ಥಾಪಿಸಲು ಪ್ರತಿಯೊಬ್ಬ ನಾಯಕರು, ಕಾರ್ಯಕರ್ತರು ಶ್ರಮಿಸಲಿದ್ದಾರೆ’ ಎಂದರು.

ಆಂಧ್ರಪ್ರದೇಶವು 25 ಲೋಕಸಭಾ ಸ್ಥಾನಗಳನ್ನು ಹೊಂದಿದೆ. 2014ರ ಚುನಾವಣೆಯಲ್ಲಿ ವೈಎಸ್‌ಆರ್‌ಪಿ ಪಕ್ಷ 22 ಕ್ಷೇತ್ರಗಳಲ್ಲಿ ಗೆದ್ದರೆ, ಮೂರು ಕ್ಷೇತ್ರಗಳಲ್ಲಿ ಟಿಡಿಪಿ ಜಯ ಸಾಧಿಸಿತ್ತು.

ಮಂಗಳವಾರ ಬಿಹಾರ ರಾಜ್ಯ ಘಟಕದ ಅಧ್ಯಕ್ಷ ಅಖಿಲೇಶ್‌ ಪ್ರಸಾದ್‌ ಸಿಂಗ್‌ ಸೇರಿದಂತೆ 40 ಮಂದಿ ಮುಖಂಡರ ಜೊತೆ ಕಾಂಗ್ರೆಸ್‌ ವರಿಷ್ಠರು ಸಭೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.