ADVERTISEMENT

ಕಲಾಪಕ್ಕೆ ಅಡ್ಡಿ ಮಾಡುವಂತೆ ಒಂದು ಕುಟುಂಬದಿಂದ ಖರ್ಗೆ ಮೇಲೆ ಒತ್ತಡ: ಜೋಶಿ

ಪಿಟಿಐ
Published 23 ಡಿಸೆಂಬರ್ 2021, 16:08 IST
Last Updated 23 ಡಿಸೆಂಬರ್ 2021, 16:08 IST
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ: ಪಿಟಿಐ ಚಿತ್ರ
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ: ಪಿಟಿಐ ಚಿತ್ರ   

ನವದೆಹಲಿ: ರಾಜ್ಯಸಭೆಯ ಕಲಾಪವನ್ನು ಸುಗಮವಾಗಿ ನಡೆಯದಂತೆ ನೋಡಿಕೊಳ್ಳಲು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ‘ಒಂದು ಕುಟುಂಬದಿಂದ ತೀವ್ರ ಒತ್ತಡವಿತ್ತು’ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಗುರುವಾರ ಆರೋಪಿಸಿದ್ದಾರೆ.

ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಬಿಕ್ಕಟ್ಟನ್ನು ಕೊನೆಗೊಳಿಸಲು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಪ್ರಯತ್ನ ನಡೆಸಿದರು. ಆದರೆ, ಮೊಂಡುತನ ಪ್ರದರ್ಶಿಸಿದ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯರು ಸದನವನ್ನು ಸುಗಮವಾಗಿ ನಡೆಸಲು ಅವಕಾಶ ಕೊಡಲಿಲ್ಲ ಎಂದಿದ್ದಾರೆ.

ಸರ್ಕಾರದ ಒತ್ತಡದಿಂದಾಗಿ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು, ಸಮಸ್ಯೆ ಬಗೆಹರಿಸಲು ಮುಂದಾಗಲಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ ಜೋಶಿ, ಖರ್ಗೆಯವರು, ಸದನವನ್ನು ಸುಗಮವಾಗಿ ನಡೆಸಲು ಅವಕಾಶ ಕೊಡಬಾರದೆಂದು ಒಂದು ಕುಟುಂಬದ ಒತ್ತಡದಲ್ಲಿದ್ದರು ಎಂದು ಆರೋಪಿಸಿದರು.

ADVERTISEMENT

12 ರಾಜ್ಯಸಭಾ ಸಂಸದರ ಅಮಾನತು ವಿಚಾರದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸದಂತೆ ನಾಯ್ಡು ಅವರ ಮೇಲೆ ಸರ್ಕಾರ ಒತ್ತಡ ಹಾಕಿದೆ ಎಂದು ಖರ್ಗೆ ಆರೋಪಿಸಿದ್ದಾರೆ ಎಂದು ವರದಿಯಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಚಳಿಗಾಲದ ಅಧಿವೇಶನದ ಸದನದಲ್ಲಿ ತಮ್ಮ ದುರ್ನಡತೆ ಮತ್ತು ಅಶಿಸ್ತಿನ ವರ್ತನೆಗೆ ರಾಜ್ಯಸಭೆಯ ಪ್ರತಿಪಕ್ಷದ ನಾಯಕರು ಸಭಾಪತಿಯನ್ನು ದೂಷಿಸುತ್ತಿರುವುದು ವಾಸ್ತವದಿಂದ ದೂರ ಮತ್ತು ಅತ್ಯಂತ ದುರದೃಷ್ಟಕರ’ ಎಂದು ಹೇಳಿದರು.

ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಮತ್ತು ಪ್ರತಿಪಕ್ಷಗಳು ಮಾತುಕತೆ ನಡೆಸುವಂತೆ ಸಭಾಪತಿ ಅನೇಕ ಸಂದರ್ಭಗಳಲ್ಲಿ ಸಲಹೆ ನೀಡಿದ್ದರು. ‘ನಾವು ಹಲವಾರು ಬಾರಿ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದೇವೆ. ಆದರೆ, ಅವರು ಒಪ್ಪಿಗೆ ಸೂಚಿಸಲೇ ಇಲ್ಲ’ಎಂದು ಜೋಶಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.