ADVERTISEMENT

ಬೆಂಗಳೂರು | ವಿಮಾನ ಪ್ರಯಾಣಿಕರ ಪರದಾಟ

ಡಿಜಿ ಯಾತ್ರಾದ ಅಸಮರ್ಪಕ ನಿರ್ವಹಣೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 22:30 IST
Last Updated 19 ಡಿಸೆಂಬರ್ 2022, 22:30 IST
ವಿಮಾನ ನಿಲ್ದಾಣದ ನಿರ್ಗಮನ ದ್ವಾರ
ವಿಮಾನ ನಿಲ್ದಾಣದ ನಿರ್ಗಮನ ದ್ವಾರ   

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ತ್ವರಿತಗೊಳಿಸಲುಡಿಜಿ ಯಾತ್ರಾ (ಮುಖಚರ್ಯೆ ಗುರುತಿಸುವಿಕೆ) ವ್ಯವಸ್ಥೆಯನ್ನು ಹೊಸದಾಗಿ ಅಳವಡಿಸಲಾಗಿದ್ದು, ಅಸಮರ್ಪಕ ಕಾರ್ಯ ನಿರ್ವಹಣೆಯಿಂದಾಗಿ ಪ್ರಯಾಣಿಕರು ಸೋಮವಾರ ಪರದಾಡುವಂತಾಯಿತು.

ಉದ್ದದ ಸಾಲಿನಲ್ಲಿ ಭದ್ರತಾ ತಪಾಸಣೆಗೆ ನಿಂತಿದ್ದ ಪ್ರಯಾಣಿಕರು ಬೆಂಗ ಳೂರು ವಿಮಾನ ನಿಲ್ದಾಣದ ನಿರ್ವಹಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತುಹಲವು ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿದ್ದು, ಸಾಲು ಸಾಲು ಟ್ವೀಟ್‌ ಮಾಡಿ ವಿಮಾನ ನಿಲ್ದಾಣದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸೇವೆ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಆದಾಗ್ಯೂ, ಡಿಜಿ ಯಾತ್ರಾ ಆ್ಯಪ್ ಬಗ್ಗೆ ಸುಳ್ಳು ಸುದ್ದಿ ನೀಡಲಾಗುತ್ತಿದೆ ಎಂದು ಪ್ರಯಾಣಿಕರು ಏರು
ಧ್ವನಿಯಲ್ಲಿ ಪ್ರಶ್ನಿಸಿದರು.

ADVERTISEMENT

ಬೆಂಗಳೂರಿನ ತೇಜಸ್‌ ಎಂಬುವರು ಟ್ವೀಟ್‌ ಮಾಡಿ, ‘ಸೋಮವಾರ ಬೆಳಿಗ್ಗೆ ಇಷ್ಟು ಉದ್ದದ ಸಾಲು ನಿರ್ಮಾಣವಾಗಿದೆ. ಡಿಜಿ ಯಾತ್ರಾ ಆ್ಯಪ್ ಇನ್ನೂ ಜಾರಿಯಾಗದೆ ಅದರ ಅಬ್ಬರದ ಪ್ರಚಾರ ಏಕೆ’ ಎಂದು ಕೇಳಿದ್ದಾರೆ.

‘ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇನ್ನೂ ಡಿಜಿ ಯಾತ್ರಾ ಆರಂಭವೇ ಆಗಿಲ್ಲ. ಆದರೂ ಕಾರ್ಯ ನಿರ್ವಹಿಸುತ್ತಿದೆ ಎಂದು ಏಕೆ ಸುದ್ದಿ ಹರಡಲಾಗುತ್ತಿದೆ’ ಎಂದು ಪ್ರಯಾಣಿಕ ಇಶಾನ್ ಶರ್ಮಾ ಎಂಬುವರು ಪ್ರಶ್ನಿಸಿದ್ದಾರೆ.

‘ಭದ್ರತಾ ತಪಾಸಣೆಯಲ್ಲಿ ಸರತಿ ಸಾಲು ಸೃಷ್ಟಿಯಾಗಿದೆ. ಶೌಚಾಲಯಗಳಲ್ಲೂ ಭಾರಿ ದಟ್ಟಣೆ ಇದ್ದು, ಬಳಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಜನಸಂದಣಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದುರೋಷನ್‌ ಎಂಬುವರು ಮನವಿ ಮಾಡಿದ್ದಾರೆ.

ಪ್ರಯಾಣಿಕರ ಸಮಸ್ಯೆಗಳಿಗೆ ಉತ್ತರಿಸಿರುವ ಬೆಂಗಳೂರು ವಿಮಾನ ನಿಲ್ದಾಣ, ‘ಶೀಘ್ರ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಪ್ರಯಾಣಿಕರ ಸಹಾಯಕ್ಕೆ ಯತ್ನಿಸಲಾಗುತ್ತಿದೆ. ಡಿಜಿ ಯಾತ್ರಾ ಆ್ಯಪ್ ಬಳಕೆಯಾಗದೆ ಹಿಂದಿನಂತೆಯೇ ವ್ಯವಸ್ಥೆ ಇರಲಿದೆ‘ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.