ADVERTISEMENT

ಅಪಹರಣಕ್ಕೊಳಗಾಗಿದ್ದ 18 ತಿಂಗಳ ಮಗುವಿಗೆ ಕೋವಿಡ್-19 ಸೋಂಕು, 22 ಜನ ಕ್ವಾರಂಟೈನ್‌

ಏಜೆನ್ಸೀಸ್
Published 17 ಮೇ 2020, 7:26 IST
Last Updated 17 ಮೇ 2020, 7:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ಅಪಹರಣಕ್ಕೊಳಗಾಗಿದ್ದ 18 ತಿಂಗಳ ಮಗುವನ್ನು ಹೈದರಾಬಾದ್ ಪೊಲೀಸ್ ಕಾರ್ಯಪಡೆಯು ರಕ್ಷಿಸಿದೆ. ಮಗುವಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.

ಮಗುವಿನ ತಾಯಿ ಮದ್ಯ ವ್ಯಸನಿ. ಮಗುವನ್ನು ನೋಡಿಕೊಳ್ಳಲು ಆಕೆ ಸಮರ್ಥಳಲ್ಲಎಂದು ತಿಳಿದ ಬಳಿಕ ಪೊಲೀಸರು ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಆಗ ನಡೆಸಿದ ಪರೀಕ್ಷೆಯಲ್ಲಿ ಮಗುವಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಬುಧವಾರವಷ್ಟೇ ಮಗು ಕಾಣೆಯಾಗಿರುವ ಕುರಿತು 22 ವರ್ಷದ ತಾಯಿ ದೂರು ನೀಡಿದ್ದರು. ನಿದ್ದೆ ಮಾಡುವಾಗ ಮಗು ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.

ADVERTISEMENT

ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಹಣ್ಣುಗಳ ಆಮಿಷವೊಡ್ಡಿ ಮಗುವನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದ 27 ವರ್ಷದ ಇಬ್ರಾಹಿಂ ಎಂಬಾತನನ್ನು ಪತ್ತೆ ಹಚ್ಚಿದ್ದರು. ತನಗೊಂದು ಗಂಡುಮಗು ಬೇಕೆಂಬ ಆಸೆ ಆರೋಪಿಗೆ ಇತ್ತು. ತನ್ನ ಪತ್ನಿಯಿಂದ ಪಡೆದ ಎಲ್ಲ ಗಂಡು ಮಕ್ಕಳೂ ವಿವಿಧ ಕಾಯಿಲೆಗಳಿಗೆ ಬಲಿಯಾಗಿದ್ದರು. ಹೀಗಾಗಿ ಆರೋಪಿಯು ಗಂಡುಮಗುವನ್ನು ಅಪಹರಿಸಿದ್ದ.

ಮಗುವನ್ನು ರಕ್ಷಿಸಿ ಸ್ವಲ್ಪ ಸಮಯದವರೆಗೆ ತಾಯಿಯೊಂದಿಗೆ ಬೆರೆಯಲು ಅವಕಾಶ ಮಾಡಿಕೊಡಲಾಯಿತು.ಆದರೆ ತಾಯಿ ಮದ್ಯ ವ್ಯಸನಿಎಂದು ತಿಳಿದ ಪೊಲೀಸರು, ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದರು. ಈ ವೇಳೆ ನಡೆಸಿದ ಪರೀಕ್ಷೆಯಲ್ಲಿ ಮಗುವಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು.

ಮಗುವಿನ ತಾಯಿ, ಮಗುವನ್ನು ಅಪಹರಿಸಿದ್ದವನ ಕುಟುಂಬದವರು, ಪೊಲೀಸರು ಮತ್ತು ಇಬ್ಬರು ಪತ್ರಕರ್ತರು ಸೇರಿ ಮಗುವಿನ ಸಂಪರ್ಕದಲ್ಲಿದ್ದ 22 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.