ಕೋಲ್ಕತ್ತ: ಇಲ್ಲಿನ ಕಾನೂನು ಕಾಲೇಜಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯ ಗುರುತನ್ನು ಬಹಿರಂಗಪಡಿಸಲು ಯತ್ನಿಸುವ ಯಾವುದೇ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೋಲ್ಕತ್ತ ಪೊಲೀಸರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ಅತ್ಯಾಚಾರ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವುದು ಕಾನೂನಿನ ಗಂಭೀರ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.
ಸಂತ್ರಸ್ತೆಯ ಗುರುತನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಹಿರಂಗಪಡಿಸುವ ಯಾವುದೇ ದಾಖಲೆಗಳು, ಚಿತ್ರಗಳು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ವಿಷಯವನ್ನು ಹಂಚಿಕೊಳ್ಳುವುದು ಸಂಬಂಧಿತ ಕಾನೂನು ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಎಂದು ನಗರ ಪೊಲೀಸರು ಎಚ್ಚರಿಸಿದ್ದಾರೆ.
ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಂತ್ರಸ್ತೆಯ ಗುರುತನ್ನು ಪತ್ತೆಹಚ್ಚಲು ಕಾರಣವಾಗುವ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಅತ್ಯಾಚಾರ ಸಂತ್ರಸ್ತರ ಘನತೆ ಮತ್ತು ಗೌಪ್ಯತೆಯನ್ನು ಕಾಪಾಡುವುದು ಕಾನೂನು ಬಾಧ್ಯತೆ ಮಾತ್ರವಲ್ಲದೆ, ನೈತಿಕ ಜವಾಬ್ದಾರಿಯೂ ಆಗಿದೆ ಎಂದು ಅವರು ಹೇಳಿದ್ದಾರೆ.
ಕಾನೂನು ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವುದಾಗಿ ಕೋಲ್ಕತ್ತ ಪೊಲೀಸರು ತಿಳಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಅದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಮತ್ತೊಬ್ಬ ಹಳೆಯ ವಿದ್ಯಾರ್ಥಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೂನ್ 25ರಂದು ಸಂಜೆ ವಿದ್ಯಾರ್ಥಿನಿಯು ಕಾಲೇಜಿಗೆ ತೆರಳಿದ್ದ ಸಂದರ್ಭದಲ್ಲಿ ಆರೋಪಿಗಳು ಶಿಕ್ಷಣ ಸಂಸ್ಥೆಯಲ್ಲಿನ ಕೊಠಡಿಗೆ ಆಕೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ತನಿಖೆಯ ಭಾಗವಾಗಿ ಮೂವರು ಆರೋಪಿಗಳ ಡಿಎನ್‌ಎ ಮಾದರಿಗಳನ್ನು ಸೋಮವಾರ ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಾದ ಮೊನೊಜಿತ್ ಮಿಶ್ರಾ, ಪ್ರಮಿತ್ ಮುಖರ್ಜಿ ಮತ್ತು ಜೈದ್ ಅಹ್ಮದ್ ನನ್ನು ಸೋಮವಾರ ಕೋಲ್ಕತ್ತದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರ ಮೂತ್ರ ಮತ್ತು ಕೂದಲಿನ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.