ADVERTISEMENT

ಕೃಷ್ಣಾ ಜಲ ವಿವಾದ: ಕರ್ನಾಟಕ, ತೆಲಂಗಾಣ ವಕೀಲರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 2:42 IST
Last Updated 13 ಜನವರಿ 2023, 2:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೃಷ್ಣಾ ಜಲವಿವಾದ ನ್ಯಾಯಮಂಡಳಿ-2 (ಕೆಡಬ್ಲ್ಯೂಡಿಟಿ) ಅಂತಿಮ ತೀರ್ಪಿನ ಅಧಿಸೂಚನೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಕರ್ನಾಟಕ ಮತ್ತು ತೆಲಂಗಾಣ ವಕೀಲರು ತೀವ್ರ ವಾಗ್ವಾದದಲ್ಲಿ ತೊಡಗಿದ್ದರು. ‌

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ವಿ.ರಾಮಸುಬ್ರಮಣಿಯನ್ ಪೀಠವು ಕೃಷ್ಣಾ ಜಲಾನಯನ ಪ್ರದೇಶ ರಾಜ್ಯಗಳಾದ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಅರ್ಜಿಗಳ ವಿಚಾರಣೆ ಪ್ರಾರಂಭಿಸಿತು.‌

ಕರ್ನಾಟಕ ಮತ್ತು ಮಹಾರಾಷ್ಟ್ರಗಳು 2013 ರಲ್ಲಿ ನೀಡಲಾದ ಕೆಡಬ್ಲ್ಯೂಡಿಟಿ -2 ಅಂತಿಮ ತೀರ್ಪಿನ ಶೀಘ್ರ ಅಧಿಸೂಚನೆ ಕೋರಿದ್ದರೆ, ತೆಲಂಗಾಣ ಮತ್ತು ಆಂಧ್ರಪ್ರದೇಶ ಎಲ್ಲಾ ನದಿ ಪಾತ್ರದ ರಾಜ್ಯಗಳಿಗೆ ಹೊಸ ನೀರಿನ ಹಂಚಿಕೆ ಕೋರಿವೆ.

ADVERTISEMENT

ತೆಲಂಗಾಣ ಪ್ರತಿನಿಧಿಸಿದ ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್, ಕರ್ನಾಟಕವು ತೆಲಂಗಾಣ ಮತ್ತು ಆಂಧ್ರಪ್ರದೇಶದ ಪಾಲಿನ ನೀರು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಲು ಪ್ರಯತ್ನಿಸಿದಾಗ, ಕರ್ನಾಟಕದ ಹಿರಿಯ ವಕೀಲ ಮೋಹನ್ ಕಾತರಕಿ ಅವರು, ಎರಡು ದಶಕದಲ್ಲಿ 2015-16ರಲ್ಲಿ ಮಾತ್ರ ಹರಿವು 442 ಟಿಎಂಸಿ ಅಡಿ ನೀರಿಗಿಂತ ಕಡಿಮೆಯಾಗಿದೆ ಎಂದು ಅಂಕಿ ಅಂಶ ಸಮೇತ ಉತ್ತರಿಸಿದರು.

ಅವಲಂಬನೆಯ ಶೇಕಡ 75ರಷ್ಟು ನೀರು ಹಂಚಿಕೆ ಮಾಡಿರುವುದರಿಂದ ವರ್ಷಗಳಲ್ಲಿ ಶೇಕಡ 25ರಷ್ಟು ಕೊರತೆ ಉಂಟಾಗುತ್ತದೆ. ಹಿಂದಿನ ಸಂಯುಕ್ತ ಆಂಧ್ರಪ್ರದೇಶವು ಕೆಡಬ್ಲ್ಯೂಡಿಟಿ 1 ಅಥವಾ ಕೆಡಬ್ಲ್ಯೂಡಿಟಿ 2 ರ ಮೊದಲು ಖಾತರಿಪಡಿಸಿದ ಹರಿವನ್ನು ಕೇಳಲಿಲ್ಲ ಮತ್ತು ಅಂತರರಾಜ್ಯ ಸಂಪರ್ಕ ಕೇಂದ್ರಗಳಲ್ಲಿ ಖಾತರಿಯ ಹರಿವುಗಳನ್ನು ಈಗ ಕೇಳುತ್ತಿರುವುದು ತೀರಾ ವಿಳಂಬವಾಗಿದೆ ಎಂದು ಕಾತರಕಿ ಹೇಳಿದರು

‘ಪ್ರಸ್ತುತ ಉಳಿದ ನೀರು ಏನಾಗುತ್ತದೆ’ ಎಂದು ನ್ಯಾಯಮೂರ್ತಿ ರಾಮಸುಬ್ರಮಣಿಯನ್ ಕೇಳಿದಾಗ, ‘ಅದು ಸಮುದ್ರಕ್ಕೆ ಹೋಗುತ್ತಿದೆ’ ಎಂದು ಕಾತರಕಿ ಹೇಳಿದರು. ಇದರಲ್ಲಿ ಕೆಡಬ್ಲ್ಯೂಡಿಟಿ 2 ಬಳಕೆ ಮಾಡಬಹುದಾದ ಹೆಚ್ಚುವರಿ 448 ಟಿಎಂಸಿ ಅಡಿ ನೀರು ಎಂದು ಅಂದಾಜಿಸಿದೆ ಮತ್ತು ಹಿಂದಿನ ಆಂಧ್ರಪ್ರದೇಶಕ್ಕೆ 195 ಟಿಎಂಸಿ ಅಡಿ ನೀರು, ಕರ್ನಾಟಕಕ್ಕೆ 173 ಟಿಎಂಸಿ ಮತ್ತು ಮಹಾರಾಷ್ಟ್ರಕ್ಕೆ 81 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ ಎಂದು ಕರ್ನಾಟಕದ ವಕೀಲರು ಹೇಳಿದರು.

ಕೇಂದ್ರ ಜಲ ಆಯೋಗ ಮತ್ತು ನೀತಿ ಆಯೋಗದಿಂದ ಯಾವುದೇ ತಾಂತ್ರಿಕ ಅನುಮತಿ ಪಡೆಯದೆ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ– 3ಕ್ಕೆ ಕರ್ನಾಟಕ ₹ 15,000 ಕೋಟಿ ಖರ್ಚು ಮಾಡಿದೆ ಎಂದು ವೈದ್ಯನಾಥನ್ ಹೇಳಿದರು.

ಮೂರು ದಿನಗಳ ವಿಚಾರಣೆ ನಂತರ ಮುಂದೂಡಲಾಯಿತು. ವಿಚಾರಣೆ ಪೂರ್ಣಗೊಳಿಸಲು ಪೀಠದ ಶೀಘ್ರ ಮರು ಅಧಿಸೂಚನೆಗಾಗಿ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಪ್ರಸ್ತಾಪಿಸಲು ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಪೀಠವು ಅನುಮತಿ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.