ADVERTISEMENT

ವಿದ್ಯುತ್‌, ನೀರು ನಿಲ್ಲಿಸುತ್ತೇವೆ: ಸೇನಾ ಅಧಿಕಾರಿಗಳಿಗೆ ಕೆಟಿಆರ್‌ ಎಚ್ಚರಿಕೆ

ಐಎಎನ್ಎಸ್
Published 12 ಮಾರ್ಚ್ 2022, 13:05 IST
Last Updated 12 ಮಾರ್ಚ್ 2022, 13:05 IST
ಕೆ.ಟಿ. ರಾಮರಾವ್ (ಚಿತ್ರ: @KTRTRS)
ಕೆ.ಟಿ. ರಾಮರಾವ್ (ಚಿತ್ರ: @KTRTRS)   

ಹೈದರಾಬಾದ್‌: ಜನರಿಗೆ ತೊಂದರೆ ಕೊಡುವುದನ್ನು ನಿಲ್ಲಿಸದೇ ಹೋದರೆ ಸಿಕಂದರಾಬಾದ್‌ನ ಕಂಟೋನ್ಮೆಂಟ್‌ಗೆ ರಾಜ್ಯ ಸರ್ಕಾರವು ವಿದ್ಯುತ್ ಮತ್ತು ನೀರು ಸರಬರಾಜನ್ನು ಕಡಿತಗೊಳಿಸಲಿದೆ ಎಂದು ಮಿಲಿಟರಿ ಅಧಿಕಾರಿಗಳಿಗೆ ತೆಲಂಗಾಣದ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮರಾವ್ (ಕೆಟಿಆರ್‌) ಶನಿವಾರ ಎಚ್ಚರಿಕೆ ನೀಡಿದ್ದಾರೆ.

ನಾಲೆ ಅಭಿವೃದ್ಧಿ ಕಾರ್ಯಕ್ರಮದ (ಎಸ್‌ಎನ್‌ಡಿಪಿ) ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಮಾತನಾಡಿರುವ ಕೆಟಿಆರ್‌, ಮಿಲಿಟರಿ ಅಧಿಕಾರಿಗಳು ತಮ್ಮ ನಡೆ ತಿದ್ದಿಕೊಳ್ಳುವುದರಲ್ಲಿ ವಿಫಲವಾದರೆ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಲಿದೆ. ಅಗತ್ಯವಿದ್ದಲ್ಲಿ ವಿದ್ಯುತ್ ಮತ್ತು ನೀರಿನ ಸಂಪರ್ಕ ಕತ್ತರಿಸಲಿದೆ ಎಂದು ಹೇಳಿದರು.

ರಕ್ಷಣಾ ಅಧಿಕಾರಿಗಳು ಕಂಟೋನ್ಮೆಂಟ್ ಪ್ರದೇಶದಲ್ಲಿನ ಹಲವಾರು ರಸ್ತೆಗಳನ್ನು ಮುಚ್ಚಿಹಾಕಿದ್ದಾರೆ. ಹೀಗಾಗಿ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ರಾಜ್ಯ ಸರ್ಕಾರವು ಈ ವಿಷಯವನ್ನು ಕೇಂದ್ರದ ಗಮನಕ್ಕೂ ತಂದಿದೆ. ಆದರೂ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿಲ್ಲ. ಇದರ ಜತೆಗೆ, ರಕ್ಷಣಾ ಅಧಿಕಾರಿಗಳು ಎಸ್‌ಎನ್‌ಡಿಪಿ ಕಾಮಗಾರಿಗಳನ್ನು ಕಾರ್ಯಗತಗೊಳಿಸಲು ಬಿಡುತ್ತಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸೇನಾ ಅಧಿಕಾರಿಗಳು ಬಲ್ಕಾಪುರ ನಾಲೆಯಲ್ಲಿ ಚೆಕ್ ಡ್ಯಾಂ ನಿರ್ಮಿಸಿದ್ದಾರೆ. ಹೀಗಾಗಿ, ‘ಶಾ ಹತಮ್ ಕೊಳ’ದ ಹಿನ್ನೀರಿನಲ್ಲಿ ‘ನದೀಮ್ ಕಾಲೋನಿ’ ಮುಳುಗಿ ಹೋಗಿದೆ. ಗೋಲ್ಕೊಂಡ ಕೋಟೆಯ ಬಳಿಯಿರುವ ಕೊಳದಿಂದ ನೀರನ್ನು ಹರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಬಿಡುತ್ತಿಲ್ಲ. ಹೀಗಾಗಿ ಸಮಸ್ಯೆ ಸೃಷ್ಟಿಯಾಗಿದೆ ಎಂದು ಅವರು ಹೇಳಿದರು.

‘ತೆಲಂಗಾಣ ಬೇರೆ ದೇಶವಲ್ಲ ಎಂಬುದನ್ನು ಸೇನಾ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆಗೆ ಸಂಬಂಧಿಸಿದಂತೆ ನಮ್ಮ ಅಧಿಕಾರಿಗಳು ಅವರೊಂದಿಗೆ ಸಭೆ ನಡೆಸುತ್ತಾರೆ. ಅವರಿಗೆ ಅರ್ಥವಾಗದಿದ್ದರೆ, ನಾವು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಗತ್ಯವಿದ್ದರೆ, ನೀರು ಸರಬರಾಜು ಮಾಡುವುದನ್ನು ಕಡಿತಗೊಳಿಸುತ್ತೇವೆ’ ಎಂದು ಅವರು ಹೇಳಿದರು.

ಸ್ಥಳೀಯ ಮಿಲಿಟರಿ ಅಧಿಕಾರಿಗಳು ಮತ್ತು ಕಂಟೋನ್ಮೆಂಟ್ ಮಂಡಳಿಯೊಂದಿಗೆ ಕೂಡಲೇ ಸಭೆ ನಡೆಸುವಂತೆ ಸಚಿವರು ವಿಶೇಷ ಮುಖ್ಯ ಕಾರ್ಯದರ್ಶಿಗೆ ಹೇಳಿದರು. ಜನರ ಹಿತಾಸಕ್ತಿ ಕಾಪಾಡಲು ಸರ್ಕಾರ ಯಾವ ಹಂತಕ್ಕಾದರೂ ಹೋಗಲಿದೆ ಎಂದು ಕೆಟಿಆರ್‌ ಸ್ಪಷ್ಟಪಡಿಸಿದರು.

ನಗರವೊಂದರಲ್ಲಿ ಜೀವನ ನಡೆಸುತ್ತಿದ್ದ ಮೇಲೆ ಎಲ್ಲರೂ ಹೊಂದಿಕೊಂಡು ಹೋಗಬೇಕು ಎಂದು ನಾಗರಿಕರಿಗೂ ಕೆಟಿಆರ್‌ ಕಿವಿ ಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.